ADVERTISEMENT

ಹಕ್ಕುಪತ್ರ ನೀಡಲು ಕ್ರಮ: ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 10:38 IST
Last Updated 16 ಮಾರ್ಚ್ 2018, 10:38 IST

ದೊಡ್ಡಬಳ್ಳಾಪುರ: ನಗರದ ವೀರಭದ್ರನಪಾಳ್ಯದ ಸರ್ವೆ ನಂ.11ರ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಕಗ್ಗಂಟಾಗಿರುವ ಗುಂಡು ತೋಪು ನಮೂದಾಗಿರುವುದನ್ನು ತೆರವು ಮಾಡುವ ಬಗ್ಗೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಇದು ಬಗೆಹರಿದ ಮೇಲೆ ಹಕ್ಕು ಪತ್ರ ನೀಡಲಾಗುವುದು ಎಂದು ತಹಶೀಲ್ದಾರ್ ಬಿ.ಎ.ಮೋಹನ್ ಅವರು ಹೇಳಿದರು.

ನಗರದ ಸಂಜಯನಗರದಲ್ಲಿ ವೀರಭದ್ರನಪಾಳ್ಯದ ಸರ್ವೆ ನಂ.14ರಲ್ಲಿನ ನಿವಾಸಿಗಳಿಗೆ ಅಕ್ರಮ ಸಕ್ರಮದಡಿ ನಿರ್ಮಿಸಲಾಗಿರುವ ಮನೆಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ತಾಲ್ಲೂಕಿನಲ್ಲಿಯೂ ವಸತಿಯೋಜನೆಯಡಿ ಹಲವಾರು ಕಾರ್ಯಗಳಾಗಿವೆ. ವಸತಿ ನಿರ್ಮಾಣಕ್ಕೆ ₹3.3ಲಕ್ಷ ನೆರವು ನೀಡಲಾಗುತ್ತಿದೆ. ಸರ್ವೆ ನಂ.11ರಲ್ಲಿ ಇರುವ ಗೊಂದಲ ಸರಿಪಡಿಸಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಕ್ಕುಪತ್ರ ಪಡೆದ
ವರು ಯಾವುದೇ ಕಾರಣಕ್ಕೂ ಮನೆ ಮಾರಾಟ ಮಾಡದೆ ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ADVERTISEMENT

ಸಮಾರಂಭದಲ್ಲಿ ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ ನಟರಾಜ್, ನಗರಸಭಾ ಸದಸ್ಯೆ ಸುಶೀಲಮ್ಮ ಮೋಹನ್ ಕುಮಾರ್, ನಾಮಿನಿ ಸದಸ್ಯ ಆಂಜಿನಮೂರ್ತಿ, ಕೆ.ಪಿ.ಸಿ.ಸಿ ಸದಸ್ಯ ಎಂ.ಜಿ.ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ವೆಂಕಟರಾಮ್, ವೆಂಕಟೇಶ್, ಜವಾಜಿ ಸೀತಾರಾಂ, ಮಂಜಮ್ಮ, ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.