ADVERTISEMENT

ಹಾಲಿನ ಗುಣಮಟ್ಟ ಹೆಚ್ಚಳಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 7:07 IST
Last Updated 7 ಸೆಪ್ಟೆಂಬರ್ 2013, 7:07 IST

ದೇವನಹಳ್ಳಿ: `ರಾಸುಗಳಿಗೆ ಪಶು ಮೇವು ಮುಸುಕಿನ ಜೋಳ ಮತ್ತು ಗೋಧಾಶಕ್ತಿ ನೀಡುವುದರಿಂದ ಹಾಲಿನ ಗುಣಮಟ್ಟ ಹೆಚ್ಚಿಸಬಹುದು' ಎಂದು ಬೆಂಗಳೂರು ಹಾಲು ಒಕ್ಕೂಟ ಪ್ರಧಾನ ವ್ಯವಸ್ಥಾಪಕ ಡಾ.ಕೃಷ್ಣರೆಡ್ಡಿ ತಿಳಿಸಿದರು.

ದೇವನಹಳ್ಳಿ ನಗರೇಶ್ವರ ಕಲ್ಯಾಣ ಮಂದಿರದಲ್ಲಿ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಐದು ವರ್ಷಗಳ ಹಿಂದೆ ಹಾಲು ಅತ್ಯಂತ ಕಡಿಮೆ ಗುಣಮಟ್ಟವನ್ನು ಹೊಂದಿತ್ತು. ಪ್ರಸ್ತುತ ಹಾಲಿನ ಗುಣಮಟ್ಟ ಶೇ.90ರಷ್ಟು ಏರಿಕೆಯಾಗಿದೆ. ಮುಂದೆ ಶೇ.100ರಷ್ಟು ಗುಣಮಟ್ಟ ಸಾಧಿಸುವ ಗುರಿ ಇದೆ ಎಂದರು.

ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಸಂಪಂಗಿಗೌಡ ಮಾತನಾಡಿ, `ತಾಲ್ಲೂಕಿನಲ್ಲಿ ಮಾಸಿಕ ಪಶು ಆಹಾರಕ್ಕೆ 627 ಟನ್ ಬೇಡಿಕೆ ಇದೆ. ಒಕ್ಕೂಟ 650 ಟನ್ ತಾಲ್ಲೂಕು ಕೇಂದ್ರದಲ್ಲಿ ಪೂರೈಕೆ ಮಾಡಿ ದಾಸ್ತಾನು ಮಾಡಿಕೊಂಡರೆ ಇಲ್ಲಿಂದಲೇ ನೇರವಾಗಿ ಸಹಕಾರ ಸಂಘಗಳಿಗೆ ಸಕಾಲದಲ್ಲಿ ತಲುಪುವ ವ್ಯವಸ್ಥೆಯಾಗುತ್ತದೆ' ಎಂದರು.

ಹಾಲಿನ ಶೇಖರಣೆ ಮತ್ತು ಒಕ್ಕೂಟ ತಾಂತ್ರಿಕ ಸೌಲಭ್ಯಗಳ ಬಗ್ಗೆ ಮಾತನಾಡಿದ ಬಮುಲ್ ನಿರ್ದೇಶಕ ಸೋಮಣ್ಣ, `ಯಶಸ್ವಿನಿ ಯೋಜನೆಗೆ 18.247 ಸಾವಿರ ಸದಸ್ಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರಯೋಜನ ಮಾತ್ರ 165 ಸದಸ್ಯರು ಪಡೆದುಕೊಂಡಿದ್ದಾರೆ. ಪ್ರತಿದಿನ ಸರಾಸರಿ 1,23,379 ಲೀಟರ್ ಹಾಲು ಶೇಖರಣೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ಪ್ರೋತ್ಸಾಹ ಧನ, ಸಂಘದ ಪದಾಧಿಕಾರಿಗಳಿಗೆ ಒಕ್ಕೂಟದ ವತಿಯಿಂದ ಪ್ರವಾಸ ಸೇರಿದಂತೆ ಉತ್ಪಾದಕ ಹಿತವನ್ನು ಒಕ್ಕೂಟ ಗಮನಿಸುತ್ತಿದೆ' ಎಂದರು.

ಬಮುಲ್ ಅಧ್ಯಕ್ಷ ಮಂಜುನಾಥ್ ಮಾತನಾಡಿದರು.ಬಮುಲ್ ವ್ಯವಸ್ಥಾಪಕ ಬಿ.ಎನ್.ನಾಗರಾಜ್ ಮತ್ತು ಬಿ.ಕೆ.ಜಗದೇಶ್, ತಾಲ್ಲೂಕು ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಗಂಗಯ್ಯ, ಶಿವಾಜಿನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.