ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ,ಪಂಗಡಗಳ ಅಭಿವೃದ್ದಿಗಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರು ₹12.05 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಧೀರಜ್ ಮಿನಿರಾಜು ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸೋಮವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕರ ಡಾ.ಬಾಬು ಜಗಜೀವನರಾಂ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಜಗಜೀವನ ರಾಂ ಭವನ ನವೀಕರಣ, ತಾಲ್ಲೂಕಿನ ವಿವಿಧೆಡೆಗಳಲ್ಲಿ 12 ಅಂಬೇಡ್ಕರ್ ಭವನ, ಪರಿಶಿಷ್ಟ ಜಾತಿಯವರ ಸ್ಮಶಾನಗಳ ಅಭಿವೃದ್ದಿ ಸೇರಿವೆ. ಎಸ್.ಟಿ.ಪಿ, ಟಿಎಸ್ಪಿ ಯೋಜನೆಯಡಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ₹3 ಕೋಟಿ ನೀಡಲಾಗಿದೆ ಎಂದು ತಿಳಿಸಿದರು.
ಜಗತ್ತಿನಲ್ಲೇ ಶ್ರೇಷ್ಟ ಸಂವಿಧಾನ ರೂಪಿಸಿಕೊಟ್ಟ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಪ್ರತಿಯೊಬ್ಬ ಭಾರತೀಯರಿಗೂ ಹಬ್ಬವಿದ್ದಂತೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರಕಿಸಿಕೊಡುವ ಮೂಲಕ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಈಡೇರಿಸಬೇಕಿದೆ ಎಂದು ಹೇಳಿದರು.
ಡಾ.ಬಾಬುಜಗಜೀವನರಾಂ ಭಾರತದ ಉಪ ಪ್ರಧಾನಿಗಳಾಗಿ, ವಾರ್ತಾ ಮತ್ತು ಪ್ರಚಾರ, ಸಾರಿಗೆ, ರೈಲ್ವೆ, ಕಾರ್ಮಿಕ ಮತ್ತು ಪುನರ್ವಸತಿ, ಆಹಾರ, ಕೃಷಿ, ಸಹಕಾರ, ನೀರಾವರಿ ಇತ್ಯಾದಿ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಹಸಿರು ಕ್ರಾಂತಿಯ ಹರಿಕಾರರೆನಿಸಿಕೊಂಡಿದ್ದಾರೆ ಎಂದರು.
ಅಂಬೇಡ್ಕರ್ ಕುರಿತು ಮಾತನಾಡಿದ ಉಪನ್ಯಾಸಕ ಎನ್.ಮಹೇಶ್, ಅಂಬೇಡ್ಕರ್ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಘೋಷ್ಯ ವಾಕ್ಯಗಳನ್ನು ಹೇಳಿ ಸಮಾನತೆಯ ಮಹತ್ವ ತಿಳಿಸಿದ್ದಾರೆ. ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ಇತರೆ ದೇಶಗಳ ಸಂವಿಧಾನಗಳ ಅಧ್ಯಯನ ಮಾಡಿ ಸಂವಿಧಾನ ರಚನೆ ಮಾಡಿರುವುದರಿಂದ ಇಂದು ಕೆಳಸ್ತರದ ವ್ಯಕ್ತಿಗಳೂ ಸಹ ಗ್ರಾಮ ಪಂಚಾಯಿತಿಯಿಂದ ದೇಶದ ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.
ಉಪನ್ಯಾಸಕ ವಿ.ವೆಂಕಟೇಶ್, ಶೋಷಿತರ ನೋವುಗಳನ್ನು ಅನುಭವಿಸುವ ಮೂಲಕ ದೀನ ದಲಿತರ ಬಾಳಿಗೆ ಉತ್ತಮ ಮಾರ್ಗ ತೋರಿಸಿದ್ದ ಡಾ.ಬಾಬು ಜಗಜೀವನರಾಂ ಅವರು ಸಜ್ಜನ ರಾಜಕಾರಣಿಗಳಾಗಿದ್ದರು. ಹಸಿರು ಕ್ರಾಂತಿಯ ಮೂಲಕ ಆಹಾರದ ಕೊರತೆ ನೀಗಿಸಿ, ಬಾಬೂಜಿ ಅವರು ರಕ್ಷಣಾ ಸಚಿವರಾಗಿ ಅಮೋಘ ಸಾಧನೆ ಮಾಡಿದ್ದಾರೆ ಎಂದು ಬಾಬೂಜಿ ಸಾಧನೆಗಳನ್ನು ಸ್ಮರಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರ ಕೆ.ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ತಹಶೀಲ್ದಾರ್ ವಿಭಾವಿದ್ಯಾ ರಾಥೋಡ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಮುನಿರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಜಿ.ಉಮಾಪತಿ, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಇದ್ದರು.
ಪ್ರತಿಜ್ಞೆ ಸ್ವೀಕಾರ: ಮೆರವಣಿಗೆ
ಕಾರ್ಯಕ್ರಮ ಆರಂಭದಲ್ಲಿ ಸಂವಿಧಾನ ಪೀಠಿಕೆ ವಾಚಿಸಿ ಪ್ರತಿಜ್ಞೆ ಸ್ವೀಕರಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಶಾಸಕ ಧೀರಜ್ ಮುನಿರಾಜು ಪುಷ್ಪ ನಮನ ಸಲ್ಲಿಸಿದರು. ತಾಲ್ಲೂಕು ಕಚೇರಿ ವೃತ್ತದ ಬಳಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರದ ಮೆರವಣಿಗೆ ವಿವಿಧ ಕಲಾತಂಡಗಳೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.