ADVERTISEMENT

‘ಕೆರೆಗಳಿಗೆ ನೀರು: ಸರ್ಕಾರದ ನಿರಾಸಕ್ತಿ’

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 8:36 IST
Last Updated 8 ಜನವರಿ 2018, 8:36 IST

ದೇವನಹಳ್ಳಿ: ಚಿಕ್ಕಬಳ್ಳಾಪುರ ಕೆ.ಇ.ಬಿ ಸಮುದಾಯ ಭವನದಲ್ಲಿ ಜ.9 ರಂದು ಬೆಳಿಗ್ಗೆ 10ಕ್ಕೆ ‘ಬಯಲು ಸೀಮೆಯತ್ತ ಬೆಂಗಳೂರಿನ ತ್ಯಾಜ್ಯ ನೀರು ಪೂರಕವೋ, ಮಾರಕವೋ’ ಕಾರ್ಯಾಗಾರ ನಡೆಯಲಿದೆ ಎಂದು ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಭಾನುವಾರ ಈ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಬಯಲು ಸೀಮೆ ಪ್ರದೇಶದ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿಗಾಗಿ ಎರಡು ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಪ್ರತಿಯೊಂದು ಕೆರೆಗಳಿಗೆ ನೀರು ಹರಿಸಬೇಕು. ಪ್ರಕೃತಿ ಸಂಪತ್ತಿನ ಜೀವಜಲ ಉಳಿಯಬೇಕು ಎಂಬ ನಮ್ಮ ಹೋರಾಟಕ್ಕೆ ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸುವುದಾಗಿ ಸರ್ಕಾರ ₹ 2,400 ಕೋಟಿ ವೆಚ್ಚ ಮಾಡಿದೆ ಎಂದು ಮಾಹಿತಿ ನೀಡಿದೆ. ತಜ್ಞರು ಎತ್ತಿನಹೊಳೆ ನೀರಿನ ಲಭ್ಯತೆ ಕುರಿತು ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಸರ್ಕಾರ ಅದನ್ನು ನಿರ್ಲಕ್ಷಿಸುತ್ತಿದೆ. ಮತ್ತೊಮ್ಮೆ ಪರಿಶೀಲನೆ ನಡೆಸಿ ಎಂದು ಒತ್ತಾಯಿಸಿದರೂ  ಪ್ರಯೋಜನವಾಗಿಲ್ಲ, ನೀರಾವರಿ ತಜ್ಞ ಡಾ.ಪರಮಶಿವಯ್ಯ ವರದಿ ಜಾರಿಗೆ ಸರ್ಕಾರ ಮನಸ್ಸು ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸರ್ಕಾರ ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಯಲು ಸೀಮೆ ಕೆರೆಗಳಿಗೆ ತುಂಬಿಸುವುದಾಗಿ ಸಾವಿರಾರು ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದೆ. ಈ ನೀರನ್ನು ಎರಡು ಬಾರಿ ಸಂಸ್ಕರಿಸಿದರೂ ತ್ಯಾಜ್ಯ ನೀರಿನಲ್ಲಿ ಕರಗಿರುವ ಲೋಹ, ನೈಟ್ರೇಟ್‌, ರಂಜಕ ಅಂಶಗಳು ಕಂಡು ಬಂದಿವೆ. ಎಷ್ಟು ಬಾರಿ ಸಂಸ್ಕರಿಸಿದರೂ ಲೋಹ ಹೊರ ಹಾಕಲು ಸಾಧ್ಯವಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು ವರದಿ ನೀಡಿದ್ದಾರೆ ಎಂದು ವಿವರಿಸಿದರು.

ಬಯಲುಸೀಮೆ ಪ್ರದೇಶದ ಕೆರೆಗಳಿಗೆ ತ್ಯಾಜ್ಯ ಸಂಸ್ಕರಣ ನೀರು ಹರಿಸಿದರೆ ಅನಾಹುತ ತಪ್ಪಿದ್ದಲ್ಲ. ಮುಂದೊಂದು ದಿನ ಭೋಪಾಲ್‌ ವಿಷ ಅನಿಲ ದುರಂತದಂತೆ ವಿಷಯುಕ್ತ ನೀರಿನ ದುರಂತಕ್ಕೆ ಕಾರಣವಾಗಲಿದೆ ಎಂದು ಆತಂಕವ್ಯಕ್ತಪಡಿಸಿದರು. ಯೋಜನೆಯ ಫಲಾನುಭವಿ ಜಿಲ್ಲೆಗಳ ರೈತರು, ತಜ್ಞ ವಿಜ್ಞಾನಿಗಳು ಭಾಗವಹಿಸುತ್ತಿರುವ ಕಾರ್ಯಾಗಾರಕ್ಕೆ ಬಂದು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಹೋರಾಟ ಸಮಿತಿ ಉಪಾಧ್ಯಕ್ಷ ಹರೀಶ್‌, ಗ್ರಾಮಾಂತರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಲ್ಯಾಣ್‌ ಕುಮಾರ್‌ ಬಾಬು, ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಮುನಿಶಾಮಣ್ಣ, ಕ.ರ.ವೇ (ಚಲಪತಿ ಬಣ) ಪದಾಧಿಕಾರಿಗಳು ಇದ್ದರು.

* * 

ಸಂಸ್ಕರಿಸಿದ ತ್ಯಾಜ್ಯ ನೀರಿನಲ್ಲಿ ಕರಗಿರುವ ಲೋಹ, ನೈಟ್ರೇಟ್‌, ರಂಜಕ ಅಂಶಗಳು ಉಳಿದಿವೆ. ವೈಜ್ಞಾನಿಕ ವರದಿ ಮುಚ್ಚಿಟ್ಟು ಕಾಮಗಾರಿ ಆರಂಭಿಸಲಾಗಿದೆ
ಆಂಜನೇಯ ರೆಡ್ಡಿ
ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.