ADVERTISEMENT

‘ಜೆಡಿಎಸ್‌, ಬಿಜೆಪಿ ಹೊಂದಾಣಿಕೆ ತಂತ್ರ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 8:44 IST
Last Updated 8 ಫೆಬ್ರುವರಿ 2018, 8:44 IST

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ಜೆಡಿಎಸ್‌, ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಆರ್‌.ಜಿ.ವೆಂಕಟಾಚಲಯ್ಯ ಹೇಳಿದರು. ತಾಲ್ಲೂಕಿನ ದೊಡ್ಡಬೆಳವಂಗಳದಲ್ಲಿ ಬುಧವಾರ ಪಕ್ಷದ ಹೋಬಳಿ ಘಟಕದ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ರಾಜ್ಯದ ಚುನಾವಣೆಯನ್ನು ಇಡೀ ದೇಶ ಗಮನಿಸುತ್ತಿದೆ ಎಂದರು. ಬಿಜೆಪಿ ರಾಜ್ಯವನ್ನು ಕಾಂಗ್ರೆಸ್‌ ಮುಕ್ತ ಮಾಡಲು ಹೊರಟಿದೆ. ಆದರೆ ಯಾವುದೇ ಒಂದು ಪಕ್ಷದ ಸೋಲು ಗೆಲುವು ಮತದಾರರ ಕೈಯಲ್ಲಿದೆ ಹೊರತು ಬಿಜೆಪಿ ಮುಖಂಡರ ಕೈಯಲ್ಲಿ ಇಲ್ಲ ಎಂದು ಕುಟುಕಿದರು.

‘ಪಕ್ಷದ ಕಾರ್ಯಕರ್ತರು ನಮ್ಮ ಹಳ್ಳಿಗಳಲ್ಲಿ 2013 ರಿಂದ ಇಲ್ಲಿಯವರೆಗೆ ಏನು ಅಭಿವೃದ್ಧಿ ಕೆಲಸಗಳು ಆಗಿವೆ ಎನ್ನುವುದನ್ನು ಪ್ರತಿಯೊಬ್ಬ ಮತದಾರರ ಮನೆಗೆ ಭೇಟಿ ನೀಡಿ ತಿಳಿಸಬೇಕು’ ಎಂದು ತಿಳಿಸಿದರು. ಚುನಾವಾಣೆಗೆ ಅಭ್ಯರ್ಥಿ ಯಾರು ಎನ್ನುವುದು ಮುಖ್ಯವಲ್ಲ. ಪಕ್ಷದ ಗೆಲುವು ಮುಖ್ಯ. ಕಾರ್ಯಕರ್ತರು ಪಕ್ಷದ ವತಿಯಿಂದ ಹೊರತರಲಾಗಿರುವ ಕೈಪಿಡಿಯನ್ನು ಓದಿ  ಕಾಂಗ್ರೆಸ್‌ ಸರ್ಕಾರದ ಸಾಧನೆಗಳ ಕುರಿತು ಮತದಾರರಿಗೆ ತಿಳಿಸಬೇಕಾಗಿದೆ. ತಾಲ್ಲೂಕಿನಲ್ಲಿ 2013ರ ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಜೆಡಿಎಸ್‌ಗೆ ಜನ ಬೆಂಬಲ ಇಲ್ಲ ಎಂದು ಅಭಿಪ್ರಾಯಪಟ್ಟರು.

ADVERTISEMENT

ಆರೋಗ್ಯದ ಸಮಸ್ಯೆಯಿಂದ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಇದನ್ನೇ ವಿರೋಧ ಪಕ್ಷದವರು ಶಾಸಕರೊಂದಿಗೆ ಭಿನ್ನಭಿಪ್ರಾಯವಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ಕಾರ್ಯಕರ್ತರು ಕಿವಿಗೊಡಬಾರದು ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿರುವ 18 ರಾಜ್ಯಗಳಲ್ಲಿ ಇಂದಿಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತ ಅಕ್ಕಿ ನೀಡುತ್ತಿಲ್ಲ. ಹೈನುಗಾರಿಕೆ ಅಭಿವೃದ್ಧಿಗೆ ₹5 ಪ್ರೋತ್ಸಾಹಧನ ನೀಡುತ್ತಿಲ್ಲ. ‌ ಆದರೆ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಇದು ಸಾಧ್ಯವಾಗಿದೆ ಎಂದರು.

ದೊಡ್ಡಬೆಳವಂಗಲ ಹೋಬಳಿಯಲ್ಲಿ ₹6 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ಆಗಿವೆ. ರಾಜಘಟ್ಟ, ಕೊನಘಟ್ಟ ಪಂಚಾಯಿತಿಗಳಲ್ಲಿ ತಲಾ ₹1 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕೆಲಸಗಳಿಗೆ ಒಂದು ವಾರದಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದರು.

ತೂಬಗೆರೆ, ಹೆಸರಘಟ್ಟ ಸೇರಿದಂತೆ ತಾಲ್ಲೂಕಿನ ಹೋಬಳಿಗಳನ್ನು ಒಳಗೊಂಡು ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಆದೇಶ ಮಾಡಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕನ್ಯಾಕುಮಾರಿ ಶ್ರೀನಿವಾಸ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ, ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಸಿ.ಶಶಿಧರ್‌, ನಾರಾಯಣಗೌಡ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಕಾಂಗ್ರೆಸ್‌ ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಎಂ.ಬೈರೇಗೌಡ, ಕಸಬಾ ಬ್ಲಾಕ್‌ ಅಧ್ಯಕ್ಷ ವೆಂಕಟೇಶ್‌, ತಾಲ್ಲೂಕಿನ ಗ್ರಾಮಾಂತರ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ, ಟಿಎಪಿಎಂಸಿಎಸ್‌ ನಿರ್ದೇಶಕ ಎಂ.ಗೋವಿಂದರಾಜ್‌, ಗ್ರಾಮಾಂತರ ಬ್ಲಾಕ್‌ ಸಮಿತಿ ಸದಸ್ಯ ಗಂಗಾಧರ್‌, ಮುಖಂಡರಾದ ಡಿ.ವಿ.ಅಶ್ವತ್ಥಪ್ಪ, ಡಿ.ಜಿ.ರಾಜಗೋಪಾಲ್‌, ಆರ್‌.ಸಿ.ರಾಮಲಿಂಗಯ್ಯ, ಟಿ.ರಾಮಕೃಷ್ಣಯ್ಯ, ಬೆಳವಂಗಲ ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.