ADVERTISEMENT

ಮಲ ಹೊರುವ ಪದ್ಧತಿ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 13:08 IST
Last Updated 2 ಮಾರ್ಚ್ 2019, 13:08 IST
ವಿಜಯಪುರದ ಬಸವನಕುಂಟೆಯಲ್ಲಿ ವಾಸವಾಗಿರುವ ಕೆಲ ಫಲಾನುಭವಿಗಳು ಸಫಾಯಿ ಕರ್ಮಚಾರಿ ನಿಗಮಕ್ಕೆ ಸಲ್ಲಿಸಿರುವ ಅರ್ಜಿಗಳಲ್ಲಿ ಮ್ಯಾನುಯೇಲ್ ಸ್ಕ್ಯಾವೆಂಜರ್ಸ್ ಎಂದು ನಮೂದಿಸಿದ್ದರಿಂದ ನೈಜತೆ ಅರಿಯಲು ಅಧಿಕಾರಿಗಳು ಪರಿಶೀಲನೆ ನಡೆಸಿದರು
ವಿಜಯಪುರದ ಬಸವನಕುಂಟೆಯಲ್ಲಿ ವಾಸವಾಗಿರುವ ಕೆಲ ಫಲಾನುಭವಿಗಳು ಸಫಾಯಿ ಕರ್ಮಚಾರಿ ನಿಗಮಕ್ಕೆ ಸಲ್ಲಿಸಿರುವ ಅರ್ಜಿಗಳಲ್ಲಿ ಮ್ಯಾನುಯೇಲ್ ಸ್ಕ್ಯಾವೆಂಜರ್ಸ್ ಎಂದು ನಮೂದಿಸಿದ್ದರಿಂದ ನೈಜತೆ ಅರಿಯಲು ಅಧಿಕಾರಿಗಳು ಪರಿಶೀಲನೆ ನಡೆಸಿದರು   

ವಿಜಯಪುರ: ನಗರ ವ್ಯಾಪ್ತಿಯಲ್ಲಿ 9 ಮಂದಿ ಸ್ವಯಂಘೋಷಿತರಾಗಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ (ಸಫಾಯಿ ಕರ್ಮಚಾರಿ) ಆಗಿ ಕೆಲಸ ಮಾಡುತ್ತಿರುವುದಾಗಿ ನಗರಾಭಿವೃದ್ಧಿ ಕೋಶಕ್ಕೆ ಸಲ್ಲಿಸಿದ್ದ ಅರ್ಜಿಗಳನ್ನು ಆಧರಿಸಿ ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದರು.

‘ಇಲ್ಲಿನ ಬಸವನಕುಂಟೆ ಬಳಿ ವಾಸವಾಗಿರುವ 9 ಮಂದಿ ನಿವಾಸಿಗಳು, ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಾಗಿ ಕೆಲಸ ಮಾಡಿದ್ದೇವೆ. ನಮಗೆ ವಿಶೇಷ ಸೌಲಭ್ಯಗಳು ಸಫಾಯಿ ಕರ್ಮಚಾರಿ ನಿಗಮದಿಂದ ಒದಗಿಸಿಕೊಡುವಂತೆ ಅರ್ಜಿಗಳನ್ನು ಸಲ್ಲಿಸಿದ್ದೇವೆ’ ಎಂದು ಸ್ಥಳೀಯರು ತಿಳಿಸಿದರು.

ನಗರಾಭಿವೃದ್ಧಿ ಕೋಶದಿಂದ ಅರ್ಜಿದಾರರ ನೈಜತೆಯನ್ನು ಪರಿಶೀಲಿಸಿ ಕೂಡಲೇ ವರದಿ ಸಲ್ಲಿಸುವಂತೆ ಪುರಸಭೆಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ, ಆರೋಗ್ಯ ನಿರೀಕ್ಷಕಿ, ಪರಿಸರ ಎಂಜಿನಿಯರ್‌ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಲವು ಪ್ರಶ್ನೆ ಕೇಳಿದರು.

ADVERTISEMENT

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮಾತನಾಡಿ, ‘ಮಲ ಹೊರುವ ಪದ್ಧತಿಯನ್ನು ನಿಷೇಧ ಮಾಡಲಾಗಿದೆ. ಯಾರಾದರೂ ಹೆಚ್ಚು ಹಣ ಕೊಡ್ತೀವಿ ಶೌಚಾಲಯದ ಪಿಟ್‌ಗಳನ್ನು ಕ್ಲೀನ್ ಮಾಡಿಕೊಡಿ ಎಂದ್ರೆ ಒಪ್ಪಬೇಡಿ. ಇದು ಕಾನೂನಿಗೆ ವಿರುದ್ಧವಾದ ಕೆಲಸ, ಅವುಗಳನ್ನು ಕ್ಲೀನ್ ಮಾಡಲು ಯಂತ್ರಗಳಿವೆ. ನೀವು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ನಮ್ಮಲ್ಲಿ ಒಳ್ಳೆಯ ಹಾಸ್ಟೇಲ್‌ಗಳಿವೆ. ನಿಮಗೆ ಬೇಕಾಗಿರುವ ಸೌಲಭ್ಯಗಳು ಸಿಗುತ್ತಿವೆ. ಅವುಗಳನ್ನು ಉಪಯೋಗ ಮಾಡಿಕೊಳ್ಳಿ’ ಎಂದು ಜಾಗೃತಿ ಮೂಡಿಸಿದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಮಾತನಾಡಿ, ‘ಮಲ ಹೊರುವುದಷ್ಟೇ ಅಲ್ಲ, ಶೌಚಾಲಯಗಳಲ್ಲಿನ ಮಲವನ್ನು ರಾಜಕಾಲುವೆ, ಚರಂಡಿಗಳಿಗೆ ಬಿಡುವಂತಿಲ್ಲ, ಕಾನೂನು ಅಷ್ಟೊಂದು ಬಿಗಿಯಾಗಿದೆ. ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಬೇರೆ ಉದ್ಯೋಗಗಳನ್ನು ಮಾಡಿಕೊಳ್ಳಿ, ಆರೋಗ್ಯ ನಿರೀಕ್ಷಕಿ ಪ್ರಭಾವತಿ, ಪರಿಸರ ಎಂಜಿನಿಯರ್‌ ಮಹೇಶ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ರವಿಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.