ಪ್ರಾತಿನಿಧಿಕ ಚಿತ್ರ
ಆನೇಕಲ್: ತಾಲ್ಲೂಕಿನ ಮೈಲಸಂದ್ರದಲ್ಲಿ ಭಾನುವಾರ ಸಂಜೆ ದಿನಸಿ ತರಲು ಅಂಗಡಿಗೆ ಹೊರಟಿದ್ದ ಯುವತಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿದ ಯುವಕರ ತಂಡವೊಂದು ಮೈ,ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದೆ.
ಯುವಕರಿಂದ ತಪ್ಪಿಸಿಕೊಂಡ ಯುವತಿ ಮನೆಗೆ ಮರಳಿದರೂ ಬಿಡದೆ ಬೈಕ್‌ನಲ್ಲಿ ಬೆನ್ನತ್ತಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಗಾಂಜಾ ನಶೆಯಲ್ಲಿದ್ದ ನಾಲ್ಕೈದು ಯುವಕರು ಮನೆಗೆ ನುಗ್ಗಲು ಯತ್ನಿಸಿದ್ದಾರೆ. ರಸ್ತೆಯಲ್ಲಿ ನಿಂತು ಯುವತಿಯನ್ನು ನಿಂದಿಸಿದ್ದಾರೆ. ಈ ಗಲಾಟೆಯನ್ನು ಕಂಡ ಸ್ಥಳೀಯರು ತರಾಟೆಗೆ ತೆಗೆದುಕೊಳ್ಳುತ್ತಲೇ ಎಲ್ಲರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಲೈಂಗಿಕ ಕಿರುಕುಳಕ್ಕೆ ಒಳಗಾದ 26 ವರ್ಷದ ಯುವತಿ ಸೋಮವಾರ ಬೆಳಗ್ಗೆ ಬನ್ನೇರುಘಟ್ಟ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲಿಸರು ತಕ್ಷಣ ಪ್ರಮುಖ ಆರೋಪಿ ರಿಚರ್ಡ್ ಎಂಬಾತನನ್ನು ಬಂಧಿಸಿದ್ದಾರೆ.
ಮೂಲತಃ ಕಮ್ಮನಹಳ್ಳಿಯ ನಿವಾಸಿಯಾದ ಯುವತಿ ಚೆನ್ನೈನಲ್ಲಿ ನೆಲೆಸಿದ್ದರು. ವಾರದ ಹಿಂದೆಯಷ್ಟೇ ಬೆಂಗಳೂರಿಗೆ ಹಿಂದಿರುಗಿ ಮೈಲಸಂದ್ರದ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಯುವತಿಯ ಬೆಂಬಲಕ್ಕೆ ಬಂದ ಜಿಮ್ ಟ್ರೈನರ್‌ವೊಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬನ್ನೇರುಘಟ್ಟ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.