ADVERTISEMENT

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

ಜಿಲ್ಲಾಧಿಕಾರಿ ಸಿ.ಎಸ್ ಕರೀಗೌಡ ಅವರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 13:43 IST
Last Updated 7 ಜೂನ್ 2019, 13:43 IST
ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎಸ್ ಕರೀಗೌಡ ಮಾತನಾಡಿದರು
ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎಸ್ ಕರೀಗೌಡ ಮಾತನಾಡಿದರು   

ದೇವನಹಳ್ಳಿ: ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಎಲ್ಲ ಸರ್ಕಾರಿ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜೂನ್ 12 ರಂದು ದೇವನಹಳ್ಳಿ ತಾಲ್ಲೂಕಿನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಚರಿಸಲು ಜಿಲ್ಲಾಧಿಕಾರಿ ಸಿ.ಎಸ್ ಕರೀಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಸಿ.ಎಸ್ ಕರೀಗೌಡಮಾತನಾಡಿ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ಬಾಲಕಾರ್ಮಿಕ ಪದ್ಧತಿ ಕುರಿತು ಜಾಗೃತಿ ಮೂಡಿಸಲು ಶಾಲಾ ಮಕ್ಕಳು, ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜೊತೆಗೂಡಿ ಜಾಥಾ ಆಯೋಜನೆ ಮಾಡಬೇಕು’ ಎಂದು ಹೇಳಿದರು.

‘ಭಾರತದಲ್ಲಿ ಬಾಲ ಕಾರ್ಮಿಕ ಪದ್ಧತಿ; ಕಾರಣಗಳು ಮತ್ತು ಪರಿಹಾರಾತ್ಮಕ ಉಪಾಯಗಳು’ ಕುರಿತಪ್ರಬಂಧ ಹಾಗೂಚರ್ಚಾ ಸ್ಪರ್ಧೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಮಕ್ಕಳಿಗೆ ಆಯೋಜನೆ ಮಾಡಬೇಕು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಕಾರ್ಮಿಕ ತರಬೇತಿ ಕೇಂದ್ರಗಳಿಗೆ ದಾಖಲಾಗಿ, ಆನಂತರ ಮುಖ್ಯವಾಹಿನಿ ಶಾಲೆಗೆ ಸೇರಿದ 2018–19ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ 60 ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರೋತ್ಸಾಹಧನವನ್ನು ವೇದಿಕೆ ಕಾರ್ಯಕ್ರಮದಲ್ಲಿ ನೀಡಲಾಗುವುದು’ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕರಿಯಪ್ಪ, ದೊಡ್ಡಬಳ್ಳಾಪುರ ಪೊಲೀಸ್ ಡಿವೈಎಸ್ಪಿ ಮೋಹನ್, ಸಹಾಯಕ ಕಾರ್ಮಿಕ ಆಯುಕ್ತ ದೇವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪುಷ್ಪಾ ರಾಯ್ಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಕಿರಣ್, ನಿರಂಜನ್, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಸುಬ್ಬಾರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.