ADVERTISEMENT

ಆರೂಢಿ: ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ

ಮೊಬೈಲ್‌ ಚಟದಿಂದ ಅಂಕ ಗಳಿಕೆಗೆ ಪೆಟ್ಟು: ಕರೀಗೌಡ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 5:58 IST
Last Updated 10 ಜುಲೈ 2022, 5:58 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಢಿ ಗ್ರಾಮದಲ್ಲಿ ನಂದನವನ ಟ್ರಸ್ಟ್‌ನಿಂದ ಶಾಲಾ ಕೊಠಡಿ ನಿರ್ಮಾಣಕ್ಕೆ ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತ ಸಿ.ಎಸ್. ಕರೀಗೌಡ ಶಂಕುಸ್ಥಾಪನೆ ನೆರವೇರಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಢಿ ಗ್ರಾಮದಲ್ಲಿ ನಂದನವನ ಟ್ರಸ್ಟ್‌ನಿಂದ ಶಾಲಾ ಕೊಠಡಿ ನಿರ್ಮಾಣಕ್ಕೆ ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತ ಸಿ.ಎಸ್. ಕರೀಗೌಡ ಶಂಕುಸ್ಥಾಪನೆ ನೆರವೇರಿಸಿದರು   

ಆರೂಢಿ (ದೊಡ್ಡಬಳ್ಳಾಪುರ ತಾಲ್ಲೂಕು): ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿ.ವಿ ವೀಕ್ಷಣೆಯ ಚಟದಿಂದ ದೂರವಿದ್ದರೆ ಉತ್ತಮ ಅಂಕಗಳಿಸಲು ಸಹಕಾರಿಯಾಗಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತ ಸಿ.ಎಸ್. ಕರೀಗೌಡ ಹೇಳಿದರು.

ತಾಲ್ಲೂಕಿನ ಆರೂಢಿ ಗ್ರಾಮದಲ್ಲಿ ನಂದನವನ ಚಾರಿಟಬಲ್ ಟ್ರಸ್ಟ್‌ನಿಂದ ಶ್ರೀಅರವಿಂದ ಪ್ರೌಢಶಾಲೆಯಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರಕ್ಕೆ ತಾಲ್ಲೂಕಿನಲ್ಲಿ ದಾನಿಗಳಿಗೆ ಕೊರತೆಯಿಲ್ಲ.‌ ದಾನಿ ಆನಂದ್ ಅವರು ಟ್ರಸ್ಟ್ ಮೂಲಕ ಶಾಲೆ ಕಟ್ಟಡ, ಪುಸ್ತಕ, ಬ್ಯಾಗ್ ವಿತರಿಸುತ್ತಿದ್ದಾರೆ. ಹಾಗೆಯೇ ಅಜಾಕ್ಸ್ ಸಂಸ್ಥೆಯಿಂದ ಗುಣಮಟ್ಟದ ಕಟ್ಟಡಗಳು ನಿರ್ಮಾಣವಾಗುತ್ತಿವೆ. ವಿದ್ಯಾರ್ಥಿಗಳು ಸಹ ಉತ್ತಮ ಗುರಿ ಹೊಂದುವ ಮೂಲಕ ಓದಿನ ಕಡೆ ಗಮನಹರಿಸಬೇಕಿದೆ ಎಂದು ಸಲಹೆನೀಡಿದರು.

ADVERTISEMENT

ಶ್ರೀಕೋಡಿ ಮಲ್ಲೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್. ನರಸೀಯಪ್ಪ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಅನೇಕ ಸೌಲಭ್ಯ ನೀಡುತ್ತಿದೆ. ಇದನ್ನು ತಲುಪಿಸಲು ಪೋಷಕರು, ಶಿಕ್ಷಕರು ಪಡುವ ಶ್ರಮವನ್ನು ಅರ್ಥಮಾಡಿಕೊಂಡು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದರೆ ಉನ್ನತ ಸ್ಥಾನ ಪಡೆಯಬಹುದಾಗಿದೆ ಎಂದು ಹೇಳಿದರು.

ನಂದನವನ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಹುಸ್ಕೂರು ಆನಂದ್ ಮಾತನಾಡಿ, ಶಾಲೆಗಳ ಅಭಿವೃದ್ಧಿಗೆ ವಿದ್ಯಾರ್ಥಿಗಳು, ಪೋಷಕರ ಸಹಕಾರ ಅಗತ್ಯ ಎಂದರು.

ಆರೂಢಿ ವ್ಯಾಪ್ತಿಯಲ್ಲಿ ಜಮೀನು ಖರೀದಿಸಲಾಗಿದ್ದು, ಶೀಘ್ರದಲ್ಲಿಯೇ ಸಣ್ಣ ಕೈಗಾರಿಕೆ ಆರಂಭಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡುವ ಚಿಂತನೆ ಇದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಪುಟ್ಟಬಸವರಾಜು, ಶ್ರೀಕೋಡಿ ಮಲ್ಲೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿದ್ದಪ್ಪ, ಪ್ರಗತಿಪರ ರೈತ ಕೆಸ್ತೂರು ಚನ್ನರಾಮಣ್ಣ, ರೆಸಿ ಫಾಮಾ ಮಾನವ ಸಂಪನ್ಮೂಲ ಅಧಿಕಾರಿ ಮಂಜುನಾಥ್, ಶ್ರೀಕೋಡಿ ಮಲ್ಲೇಶ್ವರ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎಸ್. ನಂಜುಡಾರಾಧ್ಯ, ಖಜಾಂಚಿ ಕೆಂಪಲಿಂಗಣ್ಣ, ಗ್ರಾಮಸ್ಥರಾದ ಸುಬ್ರಹ್ಮಣ್ಯ, ರಾಮಕೃಷ್ಣಪ್ಪ, ಸಿದ್ದಗಂಗಯ್ಯ, ರಾಮಣ್ಣ, ನಂಜಪ್ಪ, ಹನುಮಂತರಾಜು, ರಾಮಾಂಜಿನಯ್ಯ, ಜಯರಾಮಯ್ಯ, ಗೋಪಾಲಕೃಷ್ಣಶೆಟ್ಟಿ, ಮುಖ್ಯಶಿಕ್ಷಕ ಸುದರ್ಶನ್‌ಬಾಬು, ಸಿದ್ದರಾಮಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.