ADVERTISEMENT

ನಾಗಾರಾಧನೆಯ ಪುಣ್ಯಕ್ಷೇತ್ರ ಘಾಟಿಸುಬ್ರಹ್ಮಣ್ಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 12:59 IST
Last Updated 11 ಜನವರಿ 2019, 12:59 IST
ಶಂಕರ್
ಶಂಕರ್   

ದೊಡ್ಡಬಳ್ಳಾಪುರ:ಪುಷ್ಯ ಶುದ್ಧ ಷಷ್ಠಿ ಜ.12 ರಂದು ಮಧ್ಯಾಹ್ನ 11.45 ರಿಂದ 12.5ಕ್ಕೆ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ.

ರಾಜಧಾನಿ ಬೆಂಗಳೂರಿನಿಂದ 48 ಕಿ.ಮೀ ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಎಸ್.ಎಸ್.ಘಾಟಿ ಕ್ಷೇತ್ರ ನಾಗಾರಾಧನೆಗೆ ದಕ್ಷಿಣ ಭಾರತದಲ್ಲೇಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಕ್ಷೇತ್ರದಲ್ಲಿ ನೆಲೆಸಿರುವ ಸುಬ್ರಹ್ಮಣ್ಯಸ್ವಾಮಿಯ ದರ್ಶನ ಪಡೆಯಲು ಪ್ರತಿದಿನವು ಸಾವಿರಾರು ಜನ ಭಕ್ತಾದಿಗಳು ಬರುತ್ತಾರೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಇಲ್ಲಿ ನಡೆಯುವ ದನಗಳ ಜಾತ್ರೆಗೆ ನೆರೆಯ ರಾಜ್ಯ ಸೇರಿದಂತೆ ರಾಜ್ಯದ ನಾನಾ ಭಾಗಳಿಂದ ರೈತರು ಜಾತ್ರೆಯಲ್ಲಿ ಎತ್ತುಗಳನ್ನು ಕೊಳ್ಳಲು ಹಾಗೂ ಮಾರಾಟ ಮಾಡಲು ಬರುತ್ತಾರೆ.

ಸುಮಾರು 600 ವರ್ಷಗಳ ಹಿಂದೆ ಘಾಟಿ ಕ್ಷೇತ್ರವನ್ನು ಬಳ್ಳಾರಿ ಜಿಲ್ಲೆ ಸೊಂಡೂರು ಸಂಸ್ಥಾನದ ಘೋರ್ಪಡೆ ವಂಶದ ರಾಜರು ಅಭಿವೃದ್ಧಿ ಪಡಿಸಿದರು ಎನ್ನಲಾಗುತ್ತಿದೆ.

ADVERTISEMENT

‘ಇಲ್ಲಿನ ವಿಶೇಷವೆಂದರೆ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿ ಏಳು ಎಡೆ ಸರ್ಪರೂಪಿಯಾದ ಸುಬ್ರಹ್ಮಣ್ಯಸ್ವಾಮಿಯಾಗಿಯೂ ಹಾಗೂ ಪಶ್ಚಿಮಾಭಿಮುಖವಾಗಿ ಲಕ್ಷ್ಮೀಸಮೇತನಾಗಿ ನರಸಿಂಹಸ್ವಾಮಿಯು ಅವತರಿಸಿ ಒಂದೇ ಶಿಲೆಯಲ್ಲಿ ರಾರಾಜಿಸುತ್ತಿದ್ದಾನೆ. ಹೀಗಾಗಿ ಮುಂದಿನ ಭಾಗದಲ್ಲಿ ಸರ್ಪರೂಪದ ಸುಬ್ರಹ್ಮಣ್ಯಸ್ವಾಮಿಯ ದರ್ಶನವಾದರೆ, ಹಿಂಬದಿಯಲ್ಲಿನ ಕನ್ನಡಿಯಲ್ಲಿ ಲಕ್ಷ್ಮೀನರಸಿಂಹಸ್ವಾಮಿಯ ದರ್ಶನವಾಗುತ್ತದೆ’ ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕ ಆರ್.ಸುಬ್ರಹ್ಮಣ್ಯ.

‘ಶ್ರೀಕ್ಷೇತ್ರಕ್ಕೆ ದೇಶ, ವಿದೇಶದ ನಾನಾ ಭಾಗಗಳಿಂದ ಸ್ವಾಮಿಯವರನ್ನು ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಇದು ಸಹ ಒಂದಾಗಿದೆ. ಇಲ್ಲಿನ ಕುಮಾರಧಾರೆ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಅನನ್ಯ ಭಕ್ತಿಯಿಂದ ಸ್ವಾಮಿಯವರನ್ನು ಪೂಜಿಸಿದ ಭಕ್ತರಿಗೆ ಸರ್ಪದೋಷ ನಿವಾರಣೆಯಾಗುವುದು. ಭಕ್ತರಿಗೆ ಮಾಂಗಲ್ಯ ಭಾಗ್ಯ, ಸಂತಾನ ಭಾಗ್ಯ, ಆರೋಗ್ಯ ಭಾಗ್ಯ ಲಭಿಸುತ್ತಿದ್ದು, ಗ್ರಹ ದೋಷ ನಿವಾರಣೆಯಾಗುತ್ತದೆ’ ಎಂದರು.

ಲಕ್ಷ್ಮೀ ತಾನೇ ಸಾಕ್ಷಾತ್ ಮಹಾವಿಷ್ಣು, ಸುಬ್ರಹ್ಮಣ್ಯ ಅಂದರೆ ತಾನೆ ಶುಭ. ಶಿವ, ವಿಷ್ಣು ಯಾವುದೇ ಭೇದಭಾವ ಇಲ್ಲ ಎನ್ನುವುದೇ ಇಲ್ಲಿನ ವಿಶೇಷ. ಕ್ಷೇತ್ರದಲ್ಲಿ ಸರ್ಪಸಂಸ್ಕಾರ, ಸರ್ಪಶಾಂತಿ, ಅಶ್ಲೇಷ ಬಲಿ ಇತ್ಯಾದಿಗಳನ್ನು ನಡೆಸಲಾಗುತ್ತದೆ ಎನ್ನುತ್ತಾರೆ ದೇವಾಲಯದ ಪರಿಚಾರಕರಾದ ಎಸ್.ಎ. ಶಂಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.