ADVERTISEMENT

ದೇವನಹಳ್ಳಿ: ಮೃತ್ಯುಕೂಪವಾದ ಕಾಲುವೆ- ಇನ್ನೋರ್ವ ವಿದ್ಯಾರ್ಥಿಯ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 5:19 IST
Last Updated 30 ಡಿಸೆಂಬರ್ 2022, 5:19 IST
   

ದೇವನಹಳ್ಳಿ: ಇಲ್ಲಿನ ಚನ್ನರಾಯಪಟ್ಟಣ ಹೋಬಳಿ ದೇವನಾಯಕನಹಳ್ಳಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಶಾಲಾ ಹಿಂಭಾಗದಲ್ಲಿರುವ ದಕ್ಷಿಣ ಪಿನಾಕಿನಿ ಕಾಲುವೆಯ ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾರೆ. ಅಸ್ವಸ್ಥಗೊಂಡಿದ್ದ ಮೂವರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ ಸಂಜೆ 8ನೇ ತರಗತಿಯ ಜಾವೀದ್ ಬಾಷಾ (15) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಗುರುವಾರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಹುಲಿಗೆರೆಪುರ ಗ್ರಾಮದ 8ನೇ ತರಗತಿ ವಿದ್ಯಾರ್ಥಿ ಸಂತೋಷ್‌ (14) ಮೃತದೇಹ ಸಿಕ್ಕಿದೆ.

ಜಾವೀದ್‌ ಮೃತದೇಹ ಸಿಕ್ಕಿದ ನಂತರ ಎಚ್ಚೆತ್ತುಕೊಂಡ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಶಾಲಾ ಹಾಜರಾತಿ ಪರಿಶೀಲಿಸಿದಾಗ ಮತ್ತಷ್ಟು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ವಿಚಾರ ತಿಳಿದುಬಂದಿದೆ.

ADVERTISEMENT

ರಾತ್ರಿ ಇಡೀ ವಿದ್ಯಾರ್ಥಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಎಲ್ಲಿಯೂ ಪತ್ತೆಯಾಗದಿದ್ದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಯ ನೆರವಿನೊಂದಿಗೆ ಗುರುವಾರ ಬೆಳಿಗ್ಗೆ ಶೋಧ ಕಾರ್ಯ ಮುಂದುವರಿಸಿದರು. ನಸುಕಿನ ವೇಳೆ ಕಾಲುವೆಯಲ್ಲಿ ಸಂತೋಷ್‌ ಮೃತದೇಹ ದೊರೆಕಿದೆ.

ಶಾಲೆಯಲ್ಲಿ ಒಟ್ಟು 183 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 94 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು. ಉಳಿದ 89 ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಇದ್ದರು ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದ್ದು, ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಮೃತರಾಗಿದ್ದಾರೆ.

ಮಂಗಳವಾರ ತಡರಾತ್ರಿ ಶಾಲೆಯಲ್ಲಿದ್ದ ವಿದ್ಯಾರ್ಥಿಗಳನ್ನು ಲೆಕ್ಕ ಮಾಡಿದಾಗ ಕೇವಲ 41 ವಿದ್ಯಾರ್ಥಿಗಳು ಮಾತ್ರ ಹಾಜರಿದ್ದರು. ಉಳಿದ ವಿದ್ಯಾರ್ಥಿಗಳು ಪೋಷಕರ ಬಳಿ ತೆರಳಿರುವ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ತಹಶೀಲ್ದಾರ್‌, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಡಿ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ. ಸಂತ್ರಸ್ತ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗಿದೆ.

‘ಆರು ವಿದ್ಯಾರ್ಥಿಗಳು ಈಜಾಡಲು ತೆರಳಿದ್ದರು. ಈ ಪೈಕಿ ನಾಲ್ವರು ಸುರಕ್ಷಿತವಾಗಿದ್ದು ಇಬ್ಬರು ಅಸುನೀಗಿದ್ದಾರೆ. ಹೊಂಡದ ಬಳಿ ವಿದ್ಯಾರ್ಥಿಗಳ ಚಪ್ಪಲಿ, ಬಟ್ಟೆ ನೋಡಿದಾಗ ಅನುಮಾನಗೊಂಡು ಶೋಧ ಮುಂದುವರಿಸಿದಾಗ ಸಂತೋಷ್‌ ಮೃತದೇಹ ದೊರೆತಿದೆ’ ಎಂದು ತಹಶೀಲ್ದಾರ್‌ಶಿವರಾಜ್‌ ‘ಪ್ರಜಾವಾಣಿ’ಗೆತಿಳಿಸಿದರು.

ಘಟನೆಗೆ ಕಾರಣ ವೇನು?:ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರಿಂದ ವಸತಿ ಶಾಲೆಯಲ್ಲಿದ್ದ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಮೇಲ್ವಿಚಾರಕರನ್ನು ನೇಮಿಸಲಾಗಿತ್ತು. ಇದೇ ಸಮಯದಲ್ಲಿ ಸುತ್ತಲಿನ ಪರಿಸರ ನೋಡಲು ವಿದ್ಯಾರ್ಥಿಗಳ ಸಮೇತರಾಗಿ ಮೇಲ್ವಿಚಾರಕರು ತೆರಳಿದ್ದು, ದಾರಿ ಮಧ್ಯೆಯಲ್ಲಿರುವ ದಕ್ಷಿಣ ಪಿನಾಕಿನಿ ಕಾಲುವೆಯ ಹೊಂಡದಲ್ಲಿ ಈಜಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಮರಣೋತ್ತರ ಪರೀಕ್ಷೆ ಮಾಡಲು ಬಿಡುವುದಿಲ್ಲ ಎಂದು ಸ್ಥಳೀಯರು ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು. ಮೃತ ಸಂತೋಷ್ ಅವರ ತಾಯಿ ರೂಪ‌ಲಕ್ಷ್ಮೀ ಪುತ್ರನ ಮೃತದೇಹ ನೋಡಿ ಘಟನಾ ಸ್ಥಳದಲ್ಲಿ ಕಸಿದು ಬಿದ್ದರು. ತಂದೆ ಆನಂದ್ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರಾಂಶುಪಾಲ ಸೇರಿ ನಾಲ್ವರ ಬಂಧನ
ಈ ದುರ್ಘಟನೆ ಸಂಬಂಧ ವಸತಿ ಶಾಲೆಯ ಪ್ರಾಂಶುಪಾಲ ಶಿವಮೂರ್ತಿ, ವಾಚ್‌ಮನ್‌ ಪ್ರಸನ್ನ, ಸಿಬ್ಬಂದಿಯಾದ ರಶ್ಮಿ, ವೀಣಾ ಎಂಬುವರನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಡಿವೈಎಸ್‌ಪಿ ನಾಗರಾಜ್‌, ‘ಆಡಳಿತ ಮಂಡಳಿ ಮೇಲೆ ನಂಬಿಕೆ ಇಟ್ಟು ಮಕ್ಕಳನ್ನು ಪೋಷಕರು ವಸತಿ ಶಾಲೆಗೆ ಸೇರಿಸುತ್ತಾರೆ. ಈ ಪ್ರಕರಣದಲ್ಲಿ ತೀವ್ರತರವಾದ ನಿರ್ಲಕ್ಷತನದಿಂದ ಸಾವು ಸಂಭವಿಸಿರುವುದು ಕಂಡುಬಂದಿದೆ. ಐಪಿಸಿ ಸೆಕ್ಷನ್ 304ಎ ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.