ADVERTISEMENT

ರಾಸು ಅಂತ್ಯಸಂಸ್ಕಾರವೇ ಇವರ ಕಾಯಕ: ಶ್ರೀನಿವಾಸ್ ಕಾರ್ಯಕ್ಕೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 2:41 IST
Last Updated 10 ಮಾರ್ಚ್ 2022, 2:41 IST
ಹಸುವಿನ ಅಂತ್ಯಕ್ರಿಯೆಯಲ್ಲಿ ರೈತರೊಂದಿಗೆ ಭಾಗವಹಿಸಿರುವ ಶ್ರೀನಿವಾಸ್
ಹಸುವಿನ ಅಂತ್ಯಕ್ರಿಯೆಯಲ್ಲಿ ರೈತರೊಂದಿಗೆ ಭಾಗವಹಿಸಿರುವ ಶ್ರೀನಿವಾಸ್   

ಹೊಸಕೋಟೆ: ಸತ್ತ ಜಾನುವಾರುಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ಕಾರ್ಯದಲ್ಲಿ ತಾಲ್ಲೂಕಿನ ಕೆ. ಮಲ್ಲಸಂದ್ರ ಗ್ರಾಮದ ಬೈರೇಗೌಡರಪಾಳ್ಯದ ಶ್ರೀನಿವಾಸ್ ತೊಡಗಿಕೊಂಡಿದ್ದಾರೆ.

ಹಲವಾರು ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜಾನುವಾರುಗಳು ಸತ್ತರೆ ರೈತರು ಕೂಡಲೇ ಶ್ರೀನಿವಾಸ್ ಅವರ ಮೊಬೈಲ್ ನಂಬರ್‌ಗೆ ಕರೆ ಮಾಡುತ್ತಾರೆ. ಅವರು ಯಾವುದೇ ಕೆಲಸದಲ್ಲಿ ನಿರತರಾಗಿದ್ದರೂ ತಕ್ಷಣ ರೈತರ ಕರೆಗೆ ಓಗೊಟ್ಟು ತಮ್ಮ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ಹಾಜರಾಗುತ್ತಾರೆ. ರೈತರು ನಿಗದಿಪಡಿಸಿದ ಸ್ಥಳಕ್ಕೆ ಜಾನುವಾರುಗಳ ಮೃತದೇಹ ಕೊಂಡೊಯ್ದು ಅಂತ್ಯಸಂಸ್ಕಾರ
ನೆರವೇರಿಸುತ್ತಾರೆ.

ಮೂಕಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ಶ್ರೀನಿವಾಸ್ ಅವರು ಹೆದ್ದಾರಿಗಳು, ರಸ್ತೆ ಅಪಘಾತದಿಂದ ಅಥವಾ ಯಾವುದೋ ರೋಗಕ್ಕೆ ತುತ್ತಾಗಿ ಸಾವನ್ನಪ್ಪುವ ದನ, ಕರುಗಳನ್ನು ಸಹ ಯಾವುದೇ ಫಲಾಪೇಕ್ಷೆ ಬಯಸದೆ ಅಂತ್ಯಸಂಸ್ಕಾರ ಮಾಡುತ್ತಾ ಕಾಳಜಿ ಮೆರೆದಿದ್ದಾರೆ. ಸತತ ಹತ್ತು ವರ್ಷಗಳಿಂದ ಈ ಕಾಯಕ ಮಾಡುತ್ತಾ ಬಂದಿರುವ ಅವರು ಇಲ್ಲಿಯವರೆಗೂ 350ಕ್ಕೂ ಜಾನುವಾರುಗಳ ಅಂತ್ಯಸಂಸ್ಕಾರ ಮಾಡಿದ್ದಾರೆ.

ADVERTISEMENT

ವೃತ್ತಿಯಲ್ಲಿ ಅವರು ಕೃಷಿಕರು. ಗುತ್ತಿಗೆ ಅಥವಾ ಬಾಡಿಗೆ ಆಧಾರದಲ್ಲಿ ಜೆಸಿಬಿ ಯಂತ್ರದ ನಿರ್ವಹಣೆ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರಾಣಿಗಳು ಹಾಗೂ ಪರಿಸರದ ಮೇಲೆ ಅವರಿಗೆ ಅಪಾರ ಕಾಳಜಿ. ಜಾನುವಾರುಗಳು ಮರಣ ಹೊಂದಿದರೆ ಅಂತ್ಯಕ್ರಿಯೆಗೆ ಜೆಸಿಬಿ ಯಂತ್ರ ಮತ್ತು ಟ್ರ್ಯಾಕ್ಟರ್ ಅನ್ನು ಉಚಿತವಾಗಿ ನೀಡಿ ತಾವೇ ಮುಂದೆ ನಿಂತು ಜಾನುವಾರುಗಳ ಅಂತ್ಯಕ್ರಿಯೆ ನೆರವೇರಿಸುತ್ತಾರೆ.

‘ರೋಗರುಜಿನ ಅಥವಾ ಅಕಾಲಿಕವಾಗಿ ಮರಣ ಹೊಂದಿದ ಜಾನುವಾರುಗಳಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗುತ್ತದೆ. ಈ ಮಧ್ಯೆ ಅವುಗಳ ಅಂತ್ಯಕ್ರಿಯೆ ನಡೆಸಲು ಜೆಸಿಬಿ ಯಂತ್ರ ಮತ್ತು ಟ್ರ್ಯಾಕ್ಟರ್‌ಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ಅಂತ್ಯಕ್ರಿಯೆ ನಡೆಸುವಷ್ಟು ಅನುಕೂಲ ಇರುವುದಿಲ್ಲ. ಇಂತಹ ಸಮಯದಲ್ಲಿ ರೈತರ ನೆರವಿಗೆ ನಿಂತು ಜಾನುವಾರುಗಳ ಅಂತ್ಯಕ್ರಿಯೆ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ’ ಎನ್ನುತ್ತಾರೆ ಊರಿನ ರೈತ ಅಜಿತ್.

‘ನಾನು ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಈ ಕೆಲಸ ನನಗೆ ಬಹಳಷ್ಟು ತೃಪ್ತಿ ತಂದಿದೆ. ಸುತ್ತಮುತ್ತಲಿನ ಹತ್ತೂರಿನ ರೈತರ ಜಾನುವಾರುಗಳು ಸತ್ತರೆ ನನಗೆ ಕರೆ ಮಾಡುತ್ತಾರೆ. ಆ ಸಮಯದಲ್ಲಿ ನಾನು ಹತ್ತಿರದಲ್ಲಿ ಇದ್ದರೆ ಅಂತ್ಯಕ್ರಿಯೆಯಲ್ಲೂ ಭಾಗವಹಿಸುತ್ತೇನೆ. ಇಲ್ಲವಾದರೆ ಜೆಸಿಬಿ ಯಂತ್ರ ಮತ್ತು ಟ್ರಾಕ್ಟರ್ ಅನ್ನು ರೈತರು ಹೇಳಿದ ಸ್ಥಳಕ್ಕೆ ಕೇಳಿಸಿಕೊಡುತ್ತೇನೆ. ರೈತರ ಜೀವನಾಡಿಯಾಗಿರುವ ಜಾನುವಾರು ಬದುಕಿರುವಷ್ಟು ಕಾಲ ಅವರ ಬದುಕಿಗೆ ಆಸರೆಯಾಗಿ ನಿಲ್ಲುತ್ತವೆ. ಇವುಗಳ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನೆರವೇರಿಸುವುದು ನಮ್ಮ ಕರ್ತವ್ಯ’ ಎನ್ನುತ್ತಾರೆ ಶ್ರೀನಿವಾಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.