ADVERTISEMENT

ಎಳನೀರಿಗೆ ಬೇಡಿಕೆ; ದರ ಏರಿಕೆ

ಲಾಕ್‌ಡೌನ್‌ ಪರಿಣಾಮ: ₹ 20ರಿಂದ ₹30ಕ್ಕೆ ಮಾರಾಟ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 12:34 IST
Last Updated 4 ಏಪ್ರಿಲ್ 2020, 12:34 IST
ವಿಜಯಪುರದಲ್ಲಿ ಎಳನೀರು ವ್ಯಾಪಾರ 
ವಿಜಯಪುರದಲ್ಲಿ ಎಳನೀರು ವ್ಯಾಪಾರ    

ವಿಜಯಪುರ: ಪ್ರತಿವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ದಣಿವಾರಿಸಿಕೊಳ್ಳಲು ಎಳನೀರಿನ ಮೊರೆ ಹೋಗುವುದು ಸಹಜ. ಲಾಕ್‌ಡೌನ್‌ನಿಂದಾಗಿ ಇದರ ಬೆಲೆ ಕಡಿಮೆ ಆಗಬೇಕಿತ್ತು. ಆದರೆ, ಇದರ ದರ ₹ 30 ಕ್ಕೆ ಏರಿಕೆಯಾಗಿದ್ದು, ಬೇಡಿಕೆಯೂ ಹೆಚ್ಚಿದೆ.

ಬೇಸಿಗೆಯ ದಾಹ ತೀರಿಸುತ್ತಿದ್ದ ಎಳನೀರು ಮರಗಳಲ್ಲಿ ಸಾಕಷ್ಟು ದೊರೆಯದಿರುವುದು ಬೆಲೆ ಏರಿಕೆಯಾಗಲು ಕಾರಣವಾಗಿದೆ.ಮಾರ್ಚ್ ತಿಂಗಳ ಆರಂಭದಿಂದಲೇ ತಂಪು ಪಾನೀಯಗಳು, ಐಸ್‌ಕ್ರೀಮ್, ಎಳನೀರಿಗೆ ಬೇಡಿಕೆ ಹೆಚ್ಚುತ್ತಿತ್ತು. ಅವುಗಳಿಗಾಗಿ ಪ್ರಮುಖ ರಸ್ತೆ, ವೃತ್ತಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಆದರೆ, ಲಾಕ್‌ಡೌನ್‌ನಿಂದಾಗಿ ಜನರೂ ಮನೆಯಿಂದಾಚೆ ಬರುತ್ತಿಲ್ಲ.

ಜಿಲ್ಲೆಯ ಈ ಭಾಗದಲ್ಲಿತೆಂಗಿನ ತೋಟಗಳು ಕಡಿಮೆಯಿರುವ ಕಾರಣ ಚಿಕ್ಕಬಳ್ಳಾಪುರ, ಜಿಲ್ಲೆಯ ಕೆಲವು ಪ್ರದೇಶಗಳು ಹಾಗೂ ಆಂಧ್ರದ ಕಡೆಯಿಂದ ಎಳನೀರನ್ನು ತರಿಸಲಾಗುತ್ತಿತ್ತು. ಆದರೆ, ಲಾಕ್‌ಡೌನ್ ಪರಿಣಾಮ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಅಗತ್ಯ ವಸ್ತುಗಳ ಸಾಗಾಣಿಕೆಗೆ ಪೊಲೀಸರು ಅನುಮತಿ ಕೊಟ್ಟಿದ್ದರೂ, ವಾಹನ ಚಾಲಕರು ಬಾರದ ಕಾರಣ ಹೊರಗೆ ಹೋಗಿ ಎಳನೀರು ತರಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಮಾರಾಟಗಾರರ ಅಳಲು.

ADVERTISEMENT

‘ಸುತ್ತಮುತ್ತಲಿನ ತೋಟಗಳ ಬಳಿಯಲ್ಲಿ ಸಿಗುತ್ತಿರುವ ಎಳನೀರು ತಂದು ಮಾರಾಟ ಮಾಡುತ್ತಿದ್ದೇವೆ. ಈ ಭಾಗದಲ್ಲಿ ತೆಂಗಿನಮರಗಳ ಸಂಖ್ಯೆ ಕಡಿಮೆ. ಆದ್ದರಿಂದ ಪ್ರತಿದಿನ ಮಧ್ಯಾಹ್ನದವರೆಗೂ ಎಳನೀರು ಮಾರಾಟ ಮಾಡಿ, ಮಧ್ಯಾಹ್ನದ ನಂತರ ಮರಗಳನ್ನು ಹುಡುಕಿಕೊಂಡು ಹೋಗಬೇಕು. ಹಳ್ಳಿಗಳಿಗೆ ಹೋಗಲಿಕ್ಕೆ ಭಯವಾಗುತ್ತದೆ. ಕೆಲವು ಹಳ್ಳಿಗಳಲ್ಲಿ ಲಾಕ್‌ಡೌನ್ ಮುಗಿದ ಮೇಲೆ ಬನ್ನಿ, ಈಗ ನಮ್ಮೂರಿಗೆ ಬರಬೇಡಿ ಹೋಗಿ ಎಂದು ಬಲವಂತವಾಗಿ ವಾಪಸ್ಸು ಕಳುಹಿಸುತ್ತಿದ್ದಾರೆ’ ಎಂದು ಎಳನೀರು ವ್ಯಾಪಾರಿ ರವಿಕುಮಾರ್ ತಿಳಿಸಿದರು.

‘ಮೊದಲೆಲ್ಲಾ ಒಂದು ಎಳನೀರಿಗೆ ₹ 20 ಇತ್ತು. ಈಗ ಲಾಕ್‌ಡೌನ್‌ನಿಂದಾಗಿ ಬೇಕರಿಗಳು ಮುಚ್ಚಿವೆ. ಜನರು ತಂಪುಪಾನೀಯಗಳನ್ನು ಖರೀದಿಸಲಿಕ್ಕೆ ಸಾಧ್ಯವಾಗುತ್ತಿಲ್ಲದ ಕಾರಣ ಎಳನೀರು ಖರೀದಿಗೆ ಮುಂದಾಗುತ್ತಿದ್ದಾರೆ. ಇಲ್ಲಿ ಒಂದಕ್ಕೆ ₹ 30 ದರ ಇದೆ.ಲಾಕ್‌ಡೌನ್‌ನಲ್ಲಿ ದರ ಏರಿಕೆ ಆಗಿರುವುದು ಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ. ಆದರೆ, ಮನೆಗಳಲ್ಲಿ ಕಾಯಿಲೆಗೆ ಬಿದ್ದವರು, ಗರ್ಭಿಣಿಯರು ಸೇರಿದಂತೆ ಅವಶ್ಯವಿರುವವರಿಗೆ ಖರೀದಿ ಮಾಡಿಕೊಳ್ಳಲೇ ಬೇಕಾಗಿದೆ’ ಎಂದು ಗ್ರಾಹಕ ನಾರಾಯಣಸ್ವಾಮಿ ತಿಳಿಸಿದರು.

‘ಎಳನೀರು ಮಾರಾಟವನ್ನೇ ನೆಚ್ಚಿಕೊಂಡು ಬದುಕುವ ಸಣ್ಣಪುಟ್ಟ ವ್ಯಾಪಾರಸ್ಥರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಕ ಬೇಡಿಕೆಯಿದ್ದರೂ ಗ್ರಾಹಕರಿಗೆ ಎಳನೀರನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ನಾವು ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಸಂಸಾರ ನಿರ್ವಹಣೆಯೂ ತುಂಬಾ ಕಷ್ಟವಾಗಿ ಬಿಟ್ಟಿದೆ. ಹಣ್ಣುಗಳು, ತರಕಾರಿಗಳನ್ನು ರೈತರೇ ಮಾರುಕಟ್ಟೆಗೆ ತರುತ್ತಾರೆ. ಆದ್ದರಿಂದ ವ್ಯಾಪಾರಸ್ಥರಿಗೆ ಸ್ವಲ್ಪಮಟ್ಟಿಗಾದರೂ ಅನುಕೂಲವಾಗಲಿದೆ. ಎಳನೀರನ್ನು ತರಬೇಕಾದರೆ ನಾವೇ ಹೋಗಬೇಕು. ಮರಕ್ಕೆ ಹತ್ತಿ ಇಳಿಸಿಕೊಂಡು ಬರಬೇಕು. ಮರಕ್ಕೆ ಹತ್ತುವವರನ್ನು ಕರೆದುಕೊಂಡು ಹೋದರೆ ಒಂದು ಕಾಯಿಗೆ ಇಂತಿಷ್ಟು ಹಣ ಕೊಡಬೇಕು. ಇದೆಲ್ಲವೂ ನಾವು ವ್ಯಾಪಾರದಲ್ಲೆ ಸಂಪಾದನೆ ಮಾಡಬೇಕು ಆದ್ದರಿಂದ ಬೆಲೆ ಏರಿಕೆಯಾಗಿದೆ’ ಎಂದು ವ್ಯಾಪಾರಿ ಅಶೋಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.