ADVERTISEMENT

ಕಂಪ್ಯೂಟರ್‌ ಜ್ಞಾನ ಇಂದಿನ ಅಗತ್ಯ

ಆಟೋ ಬೆಲ್, ಕಂಪ್ಯೂಟರ್‌ ಕೊಠಡಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 14:09 IST
Last Updated 19 ಜುಲೈ 2019, 14:09 IST
ವಿಜಯಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಆವರಣದಲ್ಲಿ ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲತಾ ಅವರು ಮಾತನಾಡಿದರು
ವಿಜಯಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಆವರಣದಲ್ಲಿ ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲತಾ ಅವರು ಮಾತನಾಡಿದರು   

ವಿಜಯಪುರ: ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಕಂಪ್ಯೂಟರ್ ಶಿಕ್ಷಣ ಹಾಗೂ ಜ್ಞಾನ ಅಗತ್ಯ ಇದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲತಾ ಹೇಳಿದರು.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಆವರಣದಲ್ಲಿ ಆಟೋ ಬೆಲ್ ಕೊಠಡಿ ಹಾಗೂ ಕಂಪ್ಯೂಟರ್ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಾಥಮಿಕ ಶಾಲೆಯ ಹಂತದಿಂದಲೇ ಕಂಪ್ಯೂಟರ್ ಶಿಕ್ಷಣ ಇಂದಿನ ಮಕ್ಕಳಿಗೆ ಅತ್ಯವಶ್ಯಕವಾಗಿದೆ. ಮಕ್ಕಳು ಪಠ್ಯೇತರ ವಿಷಯಗಳನ್ನು ಕಲಿಯುವುದರಿಂದಲೂ ಹೆಚ್ಚು ಫಲಿತಾಂಶ ಪಡೆಯಲು ಸಾಧ್ಯ. ಈ ಬಾರಿ ಶೇ 100 ಫಲಿತಾಂಶವನ್ನು ಪಡೆಯಲಿಕ್ಕಾಗಿ ಈಗಿನಿಂದಲೇ ಸನ್ನದ್ಧರಾಗಬೇಕು. ಪ್ರಾರಂಭಿಕ ಹಂತದಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದರೆ ಯಾವುದೂ ಅಸಾಧ್ಯವಾಗುವುದಿಲ್ಲ. ಉತ್ತಮ ಫಲಿತಾಂಶಕ್ಕಾಗಿ ನಿಮಗೆ ಅಗತ್ಯವಾಗಿರುವ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಅಧಿಕಾರಿಗಳೂ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ವಿದ್ಯಾರ್ಥಿಗಳು ನೀಡಬೇಕು’ ಎಂದರು.

ADVERTISEMENT

ಜಿಲ್ಲಾ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ‘ಕಳೆದ ವರ್ಷ ಶೇ 11ರಷ್ಟು ಫಲಿತಾಂಶ ಏರಿಕೆಯಾಗಿದ್ದು, ಈ ಬಾರಿ ಶೇ 100ರಷ್ಟು ಫಲಿತಾಂಶವನ್ನು ನೀಡುವ ಕಡೆಗೆ ನಿಮ್ಮ ಗುರಿಯಿರಬೇಕು. ನಿರಂತರ ಅಭ್ಯಾಸ, ಏಕಾಗ್ರತೆ, ಕಠಿಣವಾದ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಸಾಧ್ಯ. ಫಲಿತಾಂಶಕ್ಕೆ ಅಗತ್ಯವಾಗಿರುವ ಎಲ್ಲಾ ಸಹಕಾರ ನೀಡಲಾಗುತ್ತದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ‘ಸರ್ಕಾರ ಮತ್ತು ದಾನಿಗಳು ಕೊಡುವಂತಹ ಎಲ್ಲಾ ಸೌಲಭ್ಯಗಳನ್ನು ಮಕ್ಕಳು ಸದುಪಯೋಗ ಮಾಡಿಕೊಳ್ಳಬೇಕು. ಈಗಾಗಲೇ ಶಾಲೆಗೆ ನೋಡಲ್ ಅಧಿಕಾರಿ ಸುನೀತಾ ಅವರು 12 ಕಂಪ್ಯೂಟರ್‌ಗಳನ್ನು ಉಚಿತವಾಗಿ ಕೊಟ್ಟಿದ್ದಾರೆ. ಸರ್ಕಾರದಿಂದಲೂ ಹೆಚ್ಚಿನ ಕಂಪ್ಯೂಟರ್‌ಗಳು ಕೊಟ್ಟಿರುವುದರಿಂದ ಪ್ರತಿಯೊಂದು ಮಗುವಿನ ಗುಣಾತ್ಮಕ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಕಲಿಕೆಗೂ ಆದ್ಯತೆ ನೀಡಲಾಗುತ್ತಿದ್ದು, ಮಕ್ಕಳು ನಿರ್ಲಕ್ಷ್ಯ ಮಾಡದೆ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಉಪಪ್ರಾಂಶುಪಾಲ ಪಿ.ವೆಂಕಟೇಶ್ ಮಾತನಾಡಿ, ‘ಇಲ್ಲಿಗೆ ಬರುವ ಮಕ್ಕಳಲ್ಲಿ ಶೇ 80ರಷ್ಟು ಮಂದಿ ಗ್ರಾಮೀಣ ಭಾಗದಿಂದ ಬರುವವರಾಗಿದ್ದಾರೆ. ಅವರಿಗೂ ಕಂಪ್ಯೂಟರ್ ಶಿಕ್ಷಣವನ್ನು ಕೊಟ್ಟು ಭವಿಷ್ಯದಲ್ಲಿ ಎಲ್ಲಾ ವಿಭಾಗಗಳಲ್ಲೂ ಅವರು ಸುಲಭವಾಗಿ ಭಾಗವಹಿಸುವಂತೆ ಮಾಡುವುದು, ಖಾಸಗಿ ಶಾಲೆಗಳ ಮಕ್ಕಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ಸಜ್ಜುಗೊಳಿಸಲಾಗುತ್ತಿದೆ. ನಮ್ಮ ಶಿಕ್ಷಕರೊಂದಿಗೆ ಪೋಷಕರೂ ಕೂಡಾ ಕೈ ಜೋಡಿಸಿದಾಗ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಉತ್ತಮ ಫಲಿತಾಂಶವನ್ನು ನೀಡಲಿಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ಡಾ.ನಾಗರಾಜಯ್ಯ ಮಾತನಾಡಿ, ‘ಶಿಕ್ಷಕರು ಜ್ಞಾನದ ಭಂಡಾರವಾಗಿರಬೇಕು. ವಿದ್ಯಾರ್ಥಿಗಳು ಜಿದ್ದಿನಿಂದ ಓದುವಂತಹವರಾಗಬೇಕು. ಅವರು, ಪ್ರಜ್ಞಾವಂತರಾಗಲು ದೇಶದ ಏಳಿಗೆಗೆ ಕೆಲಸ ಮಾಡುವಂತಹವರಾಗಿ ರೂಪುಗೊಳ್ಳಬೇಕು. ಹೆಚ್ಚು ಸವಾಲುಗಳನ್ನು ಸ್ವೀಕಾರ ಮಾಡಬೇಕು’ ಎಂದರು.

ಆಟೋ ಮೊಬೈಲ್ ವಿಭಾಗದ ಮಾಹಿತಿಯನ್ನು ಪಡೆದ ಲತಾ ಅವರು, ‘ಕಲಿಕಾ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿ ಪದ್ಮರಾಜ್ ಅವರು ಶಾಲೆಯ ಮಕ್ಕಳಿಗೆ ₹ 12,500 ಮೌಲ್ಯದ ನೋಟ್ ಪುಸ್ತಕ ವಿತರಣೆ ಮಾಡಿದರು.

ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಶೋಭಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ದೇವರಾಜಪ್ಪ, ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಹನುಮಂತಪ್ಪ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್, ಪ್ರತಿಭಾ ಹೇಮಂತ್, ವಿನುತಾ, ಪಿ.ಎಂ.ಕೊಟ್ರೇಶ್, ಬಿ.ಎಸ್.ನಾರಾಯಣ, ಡಾ.ಜಿ.ರಮೇಶಪ್ಪ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಕೆ.ಮಂಜುನಾಥ್, ಕೆಂಚೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.