ADVERTISEMENT

ಸರಳ ಭಾಷೆಯಲ್ಲಿ ಮಕ್ಕಳ ಕೃತಿ ರಚಿಸಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 13:20 IST
Last Updated 7 ಜುಲೈ 2019, 13:20 IST
ಸಾಹಿತಿ ಎಂ.ಇ. ಖಲೀಲ್‌ ಉಲ್ಲಾ ಖಾನ್ ಕಾರ್ಯಕ್ರಮ ಉದ್ಘಾಟಿಸಿದರು
ಸಾಹಿತಿ ಎಂ.ಇ. ಖಲೀಲ್‌ ಉಲ್ಲಾ ಖಾನ್ ಕಾರ್ಯಕ್ರಮ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ಮಕ್ಕಳಲ್ಲಿ ಸಾಹಿತ್ಯ ಕುರಿತು ಆಸಕ್ತಿ ಮೂಡಿಸಲು ಅರ್ಥವಾಗುವಂತ ಸರಳ ಭಾಷೆಯಲ್ಲಿ ಕೃತಿಗಳು ರಚನೆಯಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವಂತಹ ಬರಹಗಳು ಕಡಿಮೆಯಾಗುತ್ತಿವೆ ಎಂದು ಸಾಹಿತಿ ಎಂ.ಇ. ಖಲೀಲ್‌ ಉಲ್ಲಾ ಖಾನ್ ಹೇಳಿದರು.

ತಾಲ್ಲೂಕಿನ ತುರುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿಯಿಂದ ನಡೆದ ‘ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಅಂದು-ಇಂದು’ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯದ ಬೆಳವಣಿಗೆಯ ಸ್ಥಿತಿ ಗಮನಿಸಿದರೆ ಉತ್ತಮ ಸಾಹಿತ್ಯ ಕೃತಿಗಳು ಬರುವಂತಹ ಆಶಾದಾಯಕ ವಾತಾವರಣ ಇಲ್ಲದಾಗಿದೆ. ಸಾಹಿತ್ಯ ಕೃತಿಗಳ ಗಂಭೀರ ಅಧ್ಯಯನವು ವಿದ್ಯಾವಂತ ಯುವ ಸಮುದಾಯದಲ್ಲಿ ಕಾಣುತ್ತಿಲ್ಲ. ಸುಸಂಸ್ಕೃತ ಸಮಾಜದ ನಿರ್ಮಾಣದಲ್ಲಿ ಸಾಹಿತ್ಯ ಕೃತಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಅದೇ ರೀತಿ ಮಕ್ಕಳಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಸಮಕಾಲಿನ ಸಮಾಜವನ್ನು ಕುರಿತ ಬರಹಗಳು ಬರಬೇಕು ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳ ಮಹಾದೇವ್ ಮಾತಾನಾಡಿ, ಗ್ರಾಮೀಣ ಭಾಗದ ಶಾಲೆಗಳು ಸೇರಿದಂತೆ ಸಾಹಿತ್ಯಾಸಕ್ತರ ಮನೆಗಳಲ್ಲೂ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯದ ಉತ್ತಮ ವಿಚಾರಗಳ ಪ್ರಚಾರದಲ್ಲಿ ಪರಿಷತ್‌ ತೊಡಗಿಸಿಕೊಂಡಿದೆ ಎಂದರು.

ಶಾಲೆಯ ಮುಖ್ಯಶಿಕ್ಷಕ ಹನುಮೇಗೌಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧ ಮೂರ್ತಿ, ತುರುವನಹಳ್ಳಿ ಗ್ರಾಮದ ಮುಖಂಡ ವಾಸುದೇವ್, ಎಂ. ದಿಬ್ಬಗಿರಿಯಪ್ಪ, ಎಂ. ಸಿದ್ಧಲಿಂಗಪ್ಪ, ಎಂ. ನರಸೇಗೌಡ, ಟಿ.ಎನ್.ಕೃಷ್ಣಮೂರ್ತಿ, ಟಿ.ಎನ್.ಕಾಂತರಾಜು, ತಾಲ್ಲೂಕು ಕಲಾವಿದರ ಸಂಘದ ಜಂಟಿ ಕಾರ್ಯದರ್ಶಿ ಬಿ.ಆರ್. ಮುದ್ದುಕೃಷ್ಣಪ್ಪ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಟಿ.ನರಸೇಗೌಡ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಕಾರ್ಯಾಧ್ಯಕ್ಷ ತರಿದಾಳ್‌ ಶ್ರೀನಿವಾಸ್, ಎನ್. ವೆಂಕಟೇಶ್, ನ.ಮಹಾದೇವ್, ಹಸನಘಟ್ಟ ಲೀಲಾವತಿ, ಪಾಲನಜೋಗಳ್ಳಿ ಅರುಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.