ADVERTISEMENT

ವಾರ್ಡ್‌ ಸಮಿತಿ ರಚಿಸಿ ಪಕ್ಷ ಸಂಘಟಿಸಿ 

ಪುರಸಭೆ ಚುನಾವಣೆ ಪೂರ್ವಭಾವಿ ಸಭೆ, ನಗರ ಘಟಕದಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 13:20 IST
Last Updated 14 ಡಿಸೆಂಬರ್ 2018, 13:20 IST
ನಗರ ಕಾಂಗ್ರೆಸ್ ಘಟಕವತಿಯಿಂದ ಸಿ.ಪ್ರಸನ್ನಕುಮಾರ್‌ರನ್ನು ಅಭಿನಂದಿಸಲಾಯಿತು.
ನಗರ ಕಾಂಗ್ರೆಸ್ ಘಟಕವತಿಯಿಂದ ಸಿ.ಪ್ರಸನ್ನಕುಮಾರ್‌ರನ್ನು ಅಭಿನಂದಿಸಲಾಯಿತು.   

ದೇವನಹಳ್ಳಿ: ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡ್‌ಗಳಲ್ಲಿ ಸಮಿತಿ ರಚಿಸಿ ಪಕ್ಷವನ್ನು ಸಂಘಟಿಸಬೇಕಾಗಿದೆ ಎಂದು ಪುರಸಭೆ ಸದಸ್ಯ ಜಿ.ಎನ್.ವೇಣುಗೋಪಾಲ್ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ನಗರ ಕಾಂಗ್ರೆಸ್ ಘಟಕ ವತಿಯಿಂದ ಮುಂಬರುವ ಪುರಸಭೆ ಚುನಾವಣೆ ಪೂರ್ವಭಾವಿ ಸಭೆ ಮತ್ತು ನಗರ ಘಟಕ ವತಿಯಿಂದ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಸಿದ್ಧಪಡಿಸಿರುವ ಮತದಾರರ ಪಟ್ಟಿಯಲ್ಲಿ ಆನೇಕ ದೋಷಗಳಿವೆ. ಮರಣ ಹೊಂದಿವರು, ಬೇರೆಡೆ ವಾಸವಿದ್ದರೂ ಈ ಪಟ್ಟಿಯಲ್ಲಿದ್ದಾರೆ. ವಾರ್ಡ್‌ವಾರು ಗಣತಿ ನಡೆಸಿ ಮತಪಟ್ಟಿಯಿಂದ ಅಂಥವರ ಹೆಸರು ಕೈಬಿಡುವ ಕೆಲಸ ಮಾಡಬೇಕಾಗಿದೆ’ ಎಂದರು.

ADVERTISEMENT

ಕೆಪಿಸಿಸಿ ಸದಸ್ಯ ಚಿನ್ನಪ್ಪ ಮಾತನಾಡಿ, ‘ಹೊಸ ಮತದಾರರು ಸ್ಥಳೀಯರೇ ಇಲ್ಲವೆ ಹೊರ ರಾಜ್ಯದವರೇ ಎಂಬುದನ್ನು ಮೊದಲು ಪತ್ತೆ ಮಾಡಬೇಕು. ಇಲ್ಲದಿದ್ದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ’ ಎಂದರು.

ಕೆಪಿಸಿಸಿ ರಾಜ್ಯ ಹಿಂದುಳಿದ ಘಟಕ ಉಪಾಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿ, ‘ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಕ್ಷೇತ್ರದಲ್ಲಿ ಪಕ್ಷಕ್ಕೆ ಗಟ್ಟಿ ನೆಲೆ ಇದೆ. ಪುರಸಭೆಚುನಾವಣೆ ಬೆನ್ನಲ್ಲೇ ಲೋಕಸಭೆ ಚುನಾವಣೆ ನಡೆಯಲಿದೆ. ಆದ್ದರಿಂದ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ಜವಾಬ್ದಾರಿ ಹೆಚ್ಚಿದೆ. ಪ್ರತಿ ತಿಂಗಳು ಕಾರ್ಯಕರ್ತರ ಸಭೆ ನಡೆಸಿ ನೈತಿಕ ಬಲ ತುಂಬುವ ಕೆಲಸ ಆಗಬೇಕು’ ಎಂದರು.

ಪ್ರಸನ್ನ ಕುಮಾರ್ ಮಾತನಾಡಿ, ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿರವರ ಆಶಯದಂತೆ ಕಾಂಗ್ರೆಸ್ ಶಕ್ತಿ ಅಭಿಯಾನ ನಡೆಸಬೇಕಾಗಿದೆ. ಮತದಾರರನ್ನು ಭೇಟಿ ಮಾಡಿ ಮತದಾರರ ಗುರುತಿನ ಚೀಟಿಯಲ್ಲಿನ ಎಪಿಕ್‌ ನೋಂದಣಿ ಸಂಖ್ಯೆಯನ್ನು ಮೊಬೈಲ್‌ನಲ್ಲಿ ಅಪ್‌ಲೋಡ್ ಮಾಡಿದರೆ ಸದಸ್ಯತ್ವ ನೋಂದಣಿಯಾಗಲಿದೆ’ ಎಂದು ಹೇಳಿದರು.

ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿ, ‘ಪುರಸಭೆ ಚುನಾವಣೆಯಲ್ಲಿನ ಗೆಲುವು ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಪಕ್ಷ ನಿಷ್ಠೆ, ಸಂಘಟನೆಯನ್ನೇ ಮಾನದಂಡವನ್ನಾಗಿಸಿ ವಾರ್ಡ್‌ಗಳಲ್ಲಿ ಸ್ಪರ್ಧಿಸುವವರಿಗೆ ಬಿ.ಫಾರಂ ನೀಡಲಾಗುತ್ತದೆ’ ಎಂದರು.

ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಗೋಪಿ, ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ಉಪಾಧ್ಯಕ್ಷೆ ಆಶಾರಾಣಿ, ಸದಸ್ಯರಾದ ಎನ್.ರಘು, ರತ್ನಮ್ಮ, ಕೆಪಿಸಿಸಿ ಹಿಂದುಳಿದ ವರ್ಗ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಆರ್.ರವಿಕುಮಾರ್, ಭೂ ನ್ಯಾಯ ಮಂಡಳಿ ಸದಸ್ಯ ಸೋಮಣ್ಣ, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಡಿ.ವಿ. ಕೃಷ್ಣಮೂರ್ತಿ, ಕೃಷಿಕ ಸಮಾಜ ನಿರ್ದೇಶಕರಾದ ಎಸ್.ಸಿ.ಚಂದ್ರಪ್ಪ, ದೇವರಾಜ್, ಮುಖಂಡರಾದ ಬಿದಲೂರು ಮುನಿರಾಜು, ವಿ.ನಾರಾಯನಸ್ವಾಮಿ, ಜಿ.ಸುರೇಶ್, ಲಕ್ಷ್ಮಣ್‌ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.