ADVERTISEMENT

‘ಗ್ರಾಮ ಅಭಿವೃದ್ಧಿಗೆ ಸಿಎಸ್‌ಆರ್‌ ನಿಧಿ’

ದೊಡ್ಡಬಳ್ಳಾಪುರ: ಶಾಲಾ ಕೊಠಡಿಗಳ ಉದ್ಘಾಟನೆ, ಶಿಕ್ಷಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 2:57 IST
Last Updated 27 ಸೆಪ್ಟೆಂಬರ್ 2020, 2:57 IST
ಬೀಡಿಕೆರೆ ಗ್ರಾಮದಲ್ಲಿ ಸರ್ಕಾರಿ ಶಾಲಾ ಶಿಕ್ಷಕರನ್ನು ಅಭಿನಂದಿಸಲಾಯಿತು
ಬೀಡಿಕೆರೆ ಗ್ರಾಮದಲ್ಲಿ ಸರ್ಕಾರಿ ಶಾಲಾ ಶಿಕ್ಷಕರನ್ನು ಅಭಿನಂದಿಸಲಾಯಿತು   

ದೊಡ್ಡಬಳ್ಳಾಪುರ: ‘ಗ್ರಾಮೀಣ ಭಾರತವನ್ನು ಸಶಕ್ತಗೊಳಿಸಲು ಎಲ್‌ ಆಂಡ್‌ ಟಿ ಕಂಪನಿ ಸಾಮಾಜಿಕ ಜವಾಬ್ದಾರಿ ನೆರವಿನ (ಸಿಎಸ್‌ಆರ್‌) ಹಣದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ’ ಎಂದು ಲಾರ್ಸನ್ ಅಂಡ್ ಟೂಬ್ರೋ ಕಂಪನಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅರವಿಂದ್ ಕೆ.ಗರ್ಗ್ ಹೇಳಿದರು.

ಅವರು ತಾಲ್ಲೂಕಿನ ಬೀಡಿಕೆರೆ ಗ್ರಾಮದಲ್ಲಿ ಎಲ್‌ ಆಂಡ್‌ ಟಿ ಕಂಪನಿ ಹಾಗೂ ರೋಟರಿ ಸಂಸ್ಥೆ ಸಂಯುಕ್ತವಾಗಿ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಿರುವ ಕೊಠಡಿಗಳ ಉದ್ಘಾಟನೆ, ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ಬೆಂಗಳೂರಿನ ಜಕ್ಕೂರು ಕೆರೆಯನ್ನು ಜನರ ಸಹಭಾಗಿತ್ವದಲ್ಲಿ ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ. ಜಕ್ಕೂರು ಕೆರೆಯನ್ನು ಪ್ರಾಣಿ, ಪಕ್ಷಿಗಳಿಗೂ ಉಪಯೋಗವಾಗುವ ರೀತಿಯಲ್ಲಿ ಪುನರುಜ್ಜೀವನಗೊಳಿಸಲಾಗಿದೆ. ಈ ಕೆರೆಯ ಕೆಲಸ ನಮ್ಮ ಕಂಪನಿಗೆ ಮಾತ್ರ ಹೆಸರು ತಂದುಕೊಡದೆ ಈ ಕೆಲಸದಲ್ಲಿ ಭಾಗಿಯಾದ ಎಲ್ಲರಿಗೂ ವೈಯಕ್ತಿವಾಗಿ ತೃಪ್ತಿ ನೀಡಿದೆ. ಇದೇ ರೀತಿ ಬೀಡಿಕೆರೆ ಗ್ರಾಮದ ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲೆಯಲ್ಲಿ ಮಾಡಿಸಲಾಗಿ ರುವ ಕೆಲಸಗಳು ಉತ್ತಮವಾಗಿವೆ’ ಎಂದರು.

ADVERTISEMENT

ಬೆಂಗಳೂರಿನ ರೋಟರಿ ಕ್ಲಬ್‌ ಗರ್ವನರ್‌ ಬಿ.ಎಲ್‌.ನಾಗೇಂದ್ರ ಪ್ರಸಾದ್‌‌ ಮಾತನಾಡಿ, ‘ಖಾಸಗಿ ಕಂಪನಿಗಳು ತಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲಸ ಮಾಡಲು ಉತ್ಸುಕವಾಗಿವೆ. ಆದರೆ ಸರ್ಕಾರದ ವಿವಿಧ ಇಲಾಖೆಗಳಿಂದ ಸೂಕ್ತ ಸಮಯದಲ್ಲಿ ಅನುಮತಿ, ಸ್ಪಂದನೆ ದೊರೆಯುತ್ತಿಲ್ಲ. ಕೆಲವರು ಮಾತ್ರ ಉತ್ತಮವಾಗಿ ಸ್ಪಂದಿಸುತ್ತಾರೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಸಮಯದ ಮಿತಿಯಲ್ಲಿ ಕೆಲಸಗಳು ನಡೆಯಬೇಕು. ಆಗ ಮಾತ್ರ ಕೆಲಸ ಮಾಡುವ ಉತ್ಸಾಹ ಇರುತ್ತದೆ’ ಎಂದರು.

‘ರೋಟರಿ ಕ್ಲಬ್‌ ಶಿಕ್ಷಣ, ಪರಿಸರಕ್ಕೆ ಪ್ರಥಮ ಆದ್ಯತೆ ನೀಡುತ್ತಿದೆ. ಈ ವರ್ಷ ಪರಿಸರ ಅಭಿವೃದ್ಧಿ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಲಾಗುತ್ತಿದೆ. ಕೆಎಂಎಫ್‌ ಸಹಯೋಗೊಂದಿಗೆ ರೋಟರಿ ಕ್ಲಬ್‌ ‘ಗ್ರಾಮ ಲಕ್ಷ್ಮೀ ಯೋಜನೆ’ಯನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಉದ್ಯೋಗಕ್ಕೆ ಅಗತ್ಯ ಇರುವ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು. ರೈತ ಮಹಿಳೆಯರಿಗೆ ಹಸುಗಳನ್ನು ಸಾಕಲು ಕೊಡಿಸುವ ಮೂಲಕ ಸ್ವಾವಲಂಬಿಗಳಾಗಲು ಉತ್ತೇಜನ ನೀಡಲಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಈ
ಯೋಜನೆ ಜಾರಿಗೆ ತರಲಾಗುತ್ತಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬೈಯ್ಯಪ್ಪರೆಡ್ಡಿ, ಲಾರ್ಸನ್ ಅಂಡ್ ಟೂಬ್ರೋ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಡಿ.ಕೇಶವಕುಮಾರ್, ಎಚ್‌.ಎಸ್‌.ಹಂಡೆ, ಶೈಲೇಶ್‌ ಎಂ.ಕೊಡಕಿನಿ, ಸಿಎಸ್‌ಆರ್‌ ಟೀಮಿನ ಸಿ.ಅವಿನಾಶ್‌, ಉಲ್ಲಾಸ್‌, ಸತೀಶ್‌ಚಂದ್ರ, ಮಾರುಕಟ್ಟೆ ವಿಭಾಗದ ಜೆ.ಡಿ.ಕಾಮಲ್‌, ನಾಗಾನಂದ್‌, ರೋಟರಿ ಕ್ಲಬ್‌ ಅಧ್ಯಕ್ಷ ವೇಲು, ಮಿಲಿಂದ್‌ ದೇಶಪಾಂಡೆ, ರೇವತಿ ಕಾಮಾಂತ್‌, ಶಾಲಾ ಮುಖ್ಯಶಿಕ್ಷಕಿ ಮಂಗಳ ಕುಮಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.