ADVERTISEMENT

ಹೈನುಗಾರಿಕೆ ಯಶಸ್ಸಿಗೆ ಮಹಿಳೆಯರ ಶ್ರಮ ಕಾರಣ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 13:42 IST
Last Updated 27 ಜನವರಿ 2020, 13:42 IST
ಸೂಲಿಬೆಲೆ ಹೋಬಳಿಯ ಭಾವಾಪುರ ಗ್ರಾಮದ ರಸ್ತೆ ಕಾಮಗಾರಿಗೆ ಸಂಸದ ಬಿ.ಎನ್.ಬಚ್ಚೇಗೌಡ ಭೂಮಿ ಪೂಜೆ ಸಲ್ಲಿಸಿದರು
ಸೂಲಿಬೆಲೆ ಹೋಬಳಿಯ ಭಾವಾಪುರ ಗ್ರಾಮದ ರಸ್ತೆ ಕಾಮಗಾರಿಗೆ ಸಂಸದ ಬಿ.ಎನ್.ಬಚ್ಚೇಗೌಡ ಭೂಮಿ ಪೂಜೆ ಸಲ್ಲಿಸಿದರು   

ಸೂಲಿಬೆಲೆ: ಹೊಸಕೋಟೆ ತಾಲ್ಲೂಕಿನಲ್ಲಿ 1990ರಲ್ಲಿ ಕೇವಲ 80 ಹಾಲಿನ ಡೇರಿಗಳಿದ್ದವು. ಪ್ರಸ್ತುತ ಡೈರಿಗಳ ಸಂಖ್ಯೆ 200ಕ್ಕೆ ಆಗಿದೆ. ಇದಕ್ಕೆ ಹೈನು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಪರಿಶ್ರಮ ಕಾರಣ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ಸೂಲಿಬೆಲೆ ಹೋಬಳಿಯ ಭುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಡೈರಿ ಕಟ್ಟಡ ಮತ್ತು ಸಿ.ಸಿ. ರಸ್ತೆ ಹಾಗೂ ಭಾವಾಪುರ ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

‘1991-92ರಲ್ಲಿ ಡೇರಿಗಳಿಗೆ ಹೆಚ್ಚಿನ ಹಾಲು ಸರಬರಾಜು ಆದರೆ ಆ ಹಾಲನ್ನು ಡೈರಿಯಲ್ಲಿ ಸ್ವೀಕರಿಸುತ್ತಿರಲಿಲ್ಲ. ಈಗ ಎಷ್ಟೇ ಹಾಲು ಉತ್ಪತ್ತಿಯಾದರೂ ಡೇರಿಗಳು ಸ್ವೀಕರಿಸುತ್ತವೆ. ಇದಕ್ಕೆ ಕಾರಣ ತಂತ್ರಜ್ಞಾನ ಎಂದ ಅವರು, ಹೊಸಕೋಟೆ ತಾಲ್ಲೂಕಿನಲ್ಲಿ ಹಾಲು ಶೀತಲ ಘಟಕವನ್ನು 76 ಎಕರೆ ಜಾಗದಲ್ಲಿ ಪ್ರಾರಂಭ ಮಾಡಿಸಿದ ಕಾರಣ ಇಲ್ಲಿನ ಯುವಕರಿಗೆ ಉದ್ಯೋಗದ ಅವಕಾಶ ಲಭಿಸಿತು. ಇದಕ್ಕೆ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ಅವರು ಕಾರಣ’ ಎಂದರು.

ADVERTISEMENT

ಡೇರಿ ಕಟ್ಟಡಕ್ಕೆ ನಿವೇಶನ ದಾನ ಮಾಡಿದ ಭುವನಹಳ್ಳಿ ಕೃಷ್ಣಪ್ಪ ಅವರಿಗೆ ಅಭಿನಂದಿಸಿದರು.

ಹಾಲು ಒಕ್ಕೂಟ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ಮಾತನಾಡಿ, ‘ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ಹಾಲು ಉತ್ಪಾದಕರ ಸಂಘಗಳಿಗೆ ಸ್ವಂತ ಕಟ್ಟಡಗಳಿರಲಿಲ್ಲ. ಆದರೆ ಈಗ ಶೇಕಡ 95ರಷ್ಟು ಸಂಘಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ ಎಂದ ಅವರು, ಭುವನಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಬೋನಸ್ ಹಣ ಕೊಟ್ಟು ₹ 14 ಲಕ್ಷಗಳ ಲಾಭದಲ್ಲಿದೆ. ಮುಂದೆ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಬೇಕು’ ಎಂದರು.

‘ಹಾಲು ಉತ್ಪಾದಕರ ಸಂಘದವರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆಂದು ₹ 12 ಲಕ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ರಾಸುಗಳಿಗೆ ಒಕ್ಕೂಟದಿಂದ ಶೇಕ 50 ವಿಮೆ ಹಣವನ್ನು ಕೊಡಲಾಗುತ್ತಿದೆ. ಪ್ರತಿ ಡೇರಿಗೆ ಕಂಪ್ಯೂಟರ್ ನೀಡಲಾಗುತ್ತಿದೆ’ ಎಂದರು.

‘ಭುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಬಮೂಲ್ ಅನುದಾನ ₹ 3.5 ಲಕ್ಷ, ಕೆಎಂಎಫ್ ₹ 3 ಲಕ್ಷ ಅನುದಾನ ನೀಡಿವೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹಾಲು ಉತ್ಪಾದಕರ ಸಂಘದ ಸಹಯೋಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ’ ಎಂದರು.

ಹೊಸಕೋಟೆ ತಾಲ್ಲೂಕು ಟಿಎಪಿಸಿಎಂಎಸ್ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಮಾತನಾಡಿದರು. ಸೂಲಿಬೆಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ, ಭುವನಹಳ್ಳಿ ಗೋಪಾಲಪ್ಪ, ಯುವ ಮುಖಂಡ ಜಿ.ನಾರಾಯಣಗೌಡ, ನಿವೃತ್ತ ಡಿಎಫ್ಒ ವೆಂಕಟೇಶ್, ಬೆಂಗಳೂರು ಡೇರಿ ನಿರ್ದೇಶಕ ಶಿವಾಜಿ ನಾಯಕ್, ಮೇಲ್ವಿಚಾರಕ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.