ADVERTISEMENT

ರೈತರಿಗೆ ಸಾಗುವಳಿ ಪತ್ರ ನೀಡಲು ಆಗ್ರಹ

ಅರ್ಜಿ ಸಲ್ಲಿಸಿರುವ ರೈತರಿಗೆ ತ್ವರಿತವಾಗಿ ಸಾಗುವಳಿ ಪತ್ರ ನೀಡಿ: ಮಾಜಿ ಶಾಸಕ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:30 IST
Last Updated 25 ಜೂನ್ 2025, 16:30 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಮಲ್ಲೇಗೌಡನಪಾಳ್ಯದಲ್ಲಿ ಮಂಗಳವಾರ ನಡೆದ ರೈತರ ಸಭೆಯಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ತಹಶೀಲ್ದಾರ್‌ ವಿದ್ಯಾವಿಭಾರಾಥೋಡ್, ಭೂದಾಖಲೆಗಳ ಸಹಾಯಕ ಉಪನಿರ್ದೇಶಕ ಮೋಹನ್‌ಕುಮಾರ್‌ ಇದ್ದರು    
ದೊಡ್ಡಬಳ್ಳಾಪುರ ತಾಲ್ಲೂಕಿನ ಮಲ್ಲೇಗೌಡನಪಾಳ್ಯದಲ್ಲಿ ಮಂಗಳವಾರ ನಡೆದ ರೈತರ ಸಭೆಯಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ತಹಶೀಲ್ದಾರ್‌ ವಿದ್ಯಾವಿಭಾರಾಥೋಡ್, ಭೂದಾಖಲೆಗಳ ಸಹಾಯಕ ಉಪನಿರ್ದೇಶಕ ಮೋಹನ್‌ಕುಮಾರ್‌ ಇದ್ದರು       

ಸಾಸಲು (ದೊಡ್ಡಬಳ್ಳಾಪುರ): ತಾಲ್ಲೂಕಿನ ಸಾಸಲು ಹೋಬಳಿ ಮಲ್ಲೇಗೌಡನಪಾಳ್ಯ, ಭಕ್ತರಹಳ್ಳಿ, ಸಿಂಗೇನಹಳ್ಳಿ, ಲಕ್ಕೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಗೋಮಾಳ ಜಮೀನು ಉಳುಮೆ ಮಾಡುತ್ತಿರುವ ಭೂರಹಿತ ರೈತರ ಜಮೀನು ಪೋಡಿ, ದುರಸ್ತಿ ತುರ್ತಾಗಿ ನಡೆಸಿ ರೈತರಿಗೆ ಸಾಗುವಳಿ ಪತ್ರಗಳನ್ನು ನೀಡುವಂತೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಂಗಳವಾರ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ರೈತರ ಸಭೆಯಲ್ಲಿ ಆಗ್ರಹಿಸಿದರು.

ಸಾಸಲು ಹೋಬಳಿ ಲಕ್ಕೇನಹಳ್ಳಿ ಬಹುತೇಕ ರೈತರ ಜಮೀನು ಎತ್ತಿನಹೊಳೆ ನೀರು ಸಂಗ್ರಹಕ್ಕಾಗಿ ನಿರ್ಮಿಸಲಾಗುತ್ತಿರುವ ಜಲಾಶಯಕ್ಕೆ ಮುಳುಗಡೆಯಾಗುತ್ತಿದೆ. ಈ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ರೈತರಿಗೆ ನೀಡಬೇಕು. ಸಾಸಲು ಹೋಬಳಿ ಭಾಗದ ವಿವಿಧ ಗ್ರಾಮಗಳ ಭೂರಹಿತ ರೈತರು ಭೂ ಮಂಜೂರಾತಿಗಾಗಿ ನಮೂನೆ-57 ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಈಚೆಗೆ ಬಲಾಢ್ಯರು ಈ ಜಮೀನುಗಳಲ್ಲಿ ಅವರಿಗೆ ಇಷ್ಟ ಬಂದ ಕಡೆ ತಂತಿ ಬೇಲಿ ನಿರ್ಮಿಸುತ್ತಿದ್ದಾರೆ. ಇದನ್ನು ವಿರೋಧಿಸಿರುವ ರೈತರ ವಿರುದ್ಧ ದಾಖಲಾಗಿರುವ ದೂರುಗಳನ್ನು ಪೊಲೀಸರು ಸೂಕ್ತ ತನಿಖೆ ನಡೆಸಿ ರದ್ದುಗೊಳಿಸಬೇಕು. ಇದರಿಂದ ಬಡ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ವಾಸ್ತದಲ್ಲಿ ಇಂದಿಗೂ ಉಳುಮೆ ಮಾಡುತ್ತಿರುವ ಅರ್ಹ ಭೂರಹಿತ ರೈತರಿಗೆ ಅನ್ಯಾಯವಾಗದಂತೆ ತ್ವರಿತವಾಗಿ ಸರ್ವೆ ನಡೆಸಿ ಸಾಗುವಳಿ ಚೀಟಿಗಳನ್ನು ವಿತರಿಸಬೇಕು. ಸಾಗುವಳಿ ಚೀಟಿ ವಿತರಣೆಯು ಪಕ್ಷಾತೀತವಾಗಿ ನಡೆಯಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.

ತಹಶೀಲ್ದಾರ್ ವಿದ್ಯಾವಿಭಾ ರಾಥೋಡ್, ಭೂದಾಖಲೆಗಳ ಸಹಾಯಕ ಉಪನಿರ್ದೇಶಕ ಮೋಹನ್‌ಕುಮಾರ್‌ ಮಾಹಿತಿ ನೀಡಿ, ಈಗಾಗಲೇ ನಮೂನೆ-57ರಲ್ಲಿ ಅರ್ಜಿ ಸಲ್ಲಿಸಿರುವ ರೈತರ ದಾಖಲೆಗಳನ್ನು ಪರಿಶೀಲಿಸಿ ಜಮೀನು ಡ್ರೋಣ್‌ ಮೂಲಕ ಸರ್ವೆ ನಡೆಸಲಾಗುತ್ತಿದೆ. ಯಾವುದೇ ಅರ್ಹ ರೈತರಿಗೆ ಅನ್ಯಾಯವಾಗದಂತೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈಗಿನ ಭೂ ಮಂಜೂರಾತಿ ನಿಯಮದಂತೆ ನಮೂನೆ 1ರಿಂದ 5ನ್ನು ಸಿದ್ಧ ನಂತರ ಸಾಗುವಳಿ ಚೀಟಿ ನೀಡಲಾಗುತ್ತಿದೆ ಎಂದರು.

ADVERTISEMENT

ಟಿಎಪಿಎಂಸಿಎಸ್‌ ನಿರ್ದೇಶಕ ಡಿ.ಸಿದ್ದರಾಮಣ್ಣ, ಸಾಸಲು ಹೋಬಳಿ ರಾಜಸ್ವ ನಿರೀಕ್ಷಕ ಅನಂತಕುಮಾರ್, ಗ್ರಾಮಾಡಳಿತ ಅಧಿಕಾರಿ ಹನುಮಕ್ಕ ಹಾಗೂ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.