ವಿಜಯಪುರ(ದೇವನಹಳ್ಳಿ): ಪಟ್ಟಣದ ರೇಣುಕಾಎಲ್ಲಮ್ಮ ದೇವಿಯ 86 ನೇ ವರ್ಷದ ಹೂವಿನ ಕರಗ ಮಹೋತ್ಸವ, ವೀರಕುಮಾರರ ಅಲಗು ಸೇವೆಯೊಂದಿಗೆ ಮಂಗಳವಾದ್ಯಗಳೊಂದಿಗೆ ಶನಿವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ರೇಣುಕಾ ಎಲ್ಲಮ್ಮ ದೇವಾಲಯದಲ್ಲಿ ಭಾನುವಾರ ಮುಂಜಾನೆ ಹೂವಿನ ಕರಗ ಹೊತ್ತು ಕರಗದ ಪೂಜಾರಿ ದೇವರಾಜ್ ಕೊರವಂಜಿ ಹಾಡಿಗೆ ನೃತ್ಯ ಮಾಡುತ್ತಾ ದೇವಾಲಯ ಪ್ರದಕ್ಷಿಣೆ ಮಾಡಿದ ನಂತರ, ಗಂಗಾತಾಯಿ ದೇವಾಲಯದ ಬಳಿಯಿರುವ ಜಾಮೀಯಾ ಮಸೀದಿಗೆ ತೆರಳಿ ಪೂಜೆ ಸ್ವೀಕರಿಸಿತು.
ಗಾಂಧಿಚೌಕದಲ್ಲಿ, ಮಂಗಳವಾದ್ಯಗಳಲ್ಲಿ ಮೂಡಿಬಂದ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಪೂಜಾರಿ ದೇವರಾಜ್ ಅವರು, ನಂತರ, ಬಸ್ ನಿಲ್ದಾಣ, ಟೌನ್ ಹಾಲ್ ಸರ್ಕಲ್, ಕೋಲಾರ ರಸ್ತೆ, ದೇವನಹಳ್ಳಿ ರಸ್ತೆ, ಅಶೋಕ ನಗರ, ಪಾರ್ಕ್ ರಸ್ತೆ, ಚಿಕ್ಕಬಳ್ಳಾಪುರ ರಸ್ತೆ, ಕೆರೆಕೋಡಿ ರಸ್ತೆ, ಧರ್ಮರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಕೋಟೆ ಬೀದಿಯ ಮೂಲಕ ಅರಳೇಪೇಟೆ, ಗುರಪ್ಪನಮಠ, ಇಂದಿರಾನಗರದ ಮೂಲಕ ಬಂದು ದೇವಾಲಯದ ಮುಂಭಾಗದಲ್ಲಿ ಬಿಡಿಸಿದ್ದ ದೊಡ್ಡ ರಂಗೋಲಿಯಲ್ಲಿ ನೃತ್ಯ ಮಾಡಿದ ನಂತರ ದೇವಾಲಯ ಪ್ರದಕ್ಷಿಣೆ ಮಾಡಿ, ಕರಗ ಇಳಿಸಿ, ಪೂಜೆ ಸಲ್ಲಿಸಿದರು.
ಕರಗ ಬರುವ ಬೀದಿಗಳಿಗೆ ವಿದ್ಯುತ್ ದೀಪಾಂಲಕಾರ ಮಾಡಲಾಗಿತ್ತು. ಮಹಿಳೆಯರು ತಮ್ಮ ಮನೆಗಳ ಮುಂದೆ ರಂಗೋಲಿ ಬಿಡಿಸಿ, ಕರಗಕ್ಕೆ ಪೂಜೆ ಸಲ್ಲಿಸಿ, ಮಲ್ಲಿಗೆ ಹೂಗಳನ್ನು ಎರಚಿ, ನಮಸ್ಕರಿಸಿ, ಕಾಣಿಕೆ ಅರ್ಪಿಸಿದರು. ಕರಗ ಹೊತ್ತಿದ್ದ ಪೂಜಾರಿ ಕಾಲಿಗೆ, ಮಕ್ಕಳಿಂದ ನಮಸ್ಕಾರ ಮಾಡಿಸಿದರು. ವೀರಕುಮಾರರು ಕರಗವನ್ನು ಹಿಂಬಾಲಿಸುತ್ತಾ, ಗೋವಿಂದ ನಾಮಸ್ಮರಣೆಯೊಂದಿಗೆ ಅಲಗು ಸೇವೆ ಮಾಡಿದರು.
ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ತಹಶೀಲ್ದಾರ್ ಹೆಚ್ ಬಾಲಕೃಷ್ಣ, ಸೇರಿದಂತೆ ವಿವಿಧ ಗಣ್ಯರು ಕರಗ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.