ADVERTISEMENT

ದೊಡ್ಡಬಳ್ಳಾಪುರ | ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ₹10 ಲಕ್ಷ ದೇಣಿಗೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 15:44 IST
Last Updated 27 ಜೂನ್ 2025, 15:44 IST
ದೊಡ್ಡಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತ್ಯುತ್ಸವ ಆಚರಣ ಸಮಿತಿ ವತಿಯಿಂದ  ನಡೆದ ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಧೀರಜ್‌ ಮುನಿರಾಜು ಉದ್ಘಾಟಿಸಿದರು
ದೊಡ್ಡಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತ್ಯುತ್ಸವ ಆಚರಣ ಸಮಿತಿ ವತಿಯಿಂದ  ನಡೆದ ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಧೀರಜ್‌ ಮುನಿರಾಜು ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ನಗರದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ₹10 ಲಕ್ಷ ದೇಣಿಗೆ ನೀಡಲಾಗುವುದು ಎಂದು ಶಾಸಕ ಧೀರಜ್‌ ಮುನಿರಾಜು ಹೇಳಿದರು.

ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿ ವತಿಯಿಂದ ನಗರದ ಒಕ್ಕಲಿಗರ ಸಮುದಯ ಭವನದಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡರ 516ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಭವನದ ಡೈರಿ ಸಮೀಪದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಸೂಚಿಸಿರುವ ಜಾಗ ಶಿಕ್ಷಣ ಟ್ರಸ್ಟ್‌ಗೆ ಸೇರಿದೆ. ಪ್ರತಿಮೆ ನಿರ್ಮಾಣಕ್ಕೆ ಸೂಕ್ತ ಜಾಗ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಇದರೊಂದಿಗೆ ಪ್ರತಿಮೆ ನಿರ್ಮಾಣದ ನೆರವಿಗೆ ಶಾಸಕರ ಅನುದಾನ ಹಾಗೂ ವೈಯಕ್ತಿಕವಾಗಿ ₹10 ಲಕ್ಷ ನೀಡಲಾಗುವುದು. ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

ಬೆಂಗಳೂರು ಇಂದು ವಿಜ್ಞಾನ ಮತ್ತು ತಂತ್ರಜ್ಞಾನ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದರೆ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಯೋಜನೆಗಳ ಫಲ. ಇದಲ್ಲದೇ ರೈತಾಪಿ ವರ್ಗಕ್ಕೆ ಆಸರೆ ನೀಡಲು ಕೆರೆ, ಕುಂಟೆಗಳನ್ನು ಕಟ್ಟಿಸಿದರು. ಒಕ್ಕಲುತನ ಮಾಡುವ ಸಮುದಾಯ ಬದುಕು ರೂಪಿಸಿಕೊಳ್ಳಲು ಕೆಂಪೇಗೌಡರ ಕೊಡುಗೆ ಅಪರಾರವಾಗಿದೆ ಎಂದರು.

ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಕೆಂಪೇಗೌಡರ ಪರಿಶ್ರಮದಿಂದಾಗಿ ಇಂದು ಬೆಂಗಳೂರು ನಗರ ವಿಶ್ವದಲ್ಲಿ ಹೆಸರು ಮಾಡಲು ಸಹಕಾರಿಯಾಗಿದೆ. ವಿವಿಧ ಸಮುದಾಯಗಳ ಕಸುಬುಗಳ ಬೆಳವಣಿಗೆಗೆ ಪೂರಕವಾದ ವ್ಯವಹಾರದ ವಾತಾವರಣವನ್ನು ನಿರ್ಮಿಸಿದ ಕೆಂಪೇಗೌಡರು, ಇದಕ್ಕಾಗಿ ವಿವಿಧ ಪೇಟೆಗಳು ಮತ್ತು ಬೀದಿಗಳನ್ನು ಹುಟ್ಟುಹಾಕಿದರು. ಕೆಂಪೇಗೌಡರು ಬೆಂಗಳೂರಿನಲ್ಲಿ ಸ್ಥಾಪಿಸಿದ ಕೆರೆ ಕಟ್ಟೆಗಳು, ದೇವಸ್ಥಾನಗಳು, ದ್ವಾರಗಳು ಈಗಲೂ ಕಾಣಸಿಗುತ್ತವೆ ಎಂದರು.

ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಕ್ಕೂ  ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್, ಕೆಂಪೇಗೌಡ ಜಯಂತ್ಯುತ್ಸವ ಆಚರಣ ಸಮಿತಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ,ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ನಗರಸಭಾ ಸದಸ್ಯರಾದ ಬಂತಿವೆಂಕಟೇಶ್, ಮುಖಂಡರಾದ ಎ.ನರಸಿಂಹಯ್ಯ, ಬಿ.ಸಿ.ವೆಂಕಟೇಶ್, ಬಿ.ಸಿ.ನಾರಾಯಣಸ್ವಾಮಿ, ಚಿಕ್ಕರಾಮಕೃಷ್ಣಪ್ಪ, ತಿ.ರಂಗರಾಜು, ಜಗದೀಶರೆಡ್ಡಿ, ಬೈರೇಗೌಡ, ಕೆಂಪೇಗೌಡ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಂತಮ್ಮ,ಗೌರವ ಅಧ್ಯಕ್ಷೆ ರೇವತಿ,ಕಾರ್ಯದರ್ಶಿ ಡಿ.ಎನ್‌.ಲಕ್ಷ್ಮಮ್ಮ, ಖಜಾಂಚಿ ರತ್ನಮ್ಮ ಇದ್ದರು.

ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಒಕ್ಕಲಿಗರ ಭವನದದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಕೆಂಪೇಗೌಡ ಮೂರ್ತಿಯ ಉತ್ಸವ ವಿವಿಧ ಕಲಾತಂಡಗಳೊಡನೆ ನಡೆಯಿತು. ಮೆರವಣಿಗೆಗೆ ಉಪವಿಭಾಗಾಧಿಕಾರಿ ಎನ್‌.ದುರ್ಗಾಶ್ರೀ, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷೆ, ಹಾಗೂ ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್‌ ಮೆರವಣಿಗೆಗೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.