ADVERTISEMENT

ಪ್ಲಾಸ್ಟಿಕ್‌ನಲ್ಲಿ ಆಹಾರ ಪ್ಯಾಕ್‌: ಬೇಕರಿ, ಹೋಟೆಲ್‌ಗೆ ಬೀಗ

ದೊಡ್ಡಬಳ್ಳಾಪುರ ತಾ.ಪಂ ಇಒ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 16:20 IST
Last Updated 28 ಮೇ 2025, 16:20 IST
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮ ಪಂಚಾಯತಿ ವತಿಯಿಂದ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತ ಜಾಗೃತಿ ಜಾಥಾ ನಡೆಯಿತು
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮ ಪಂಚಾಯತಿ ವತಿಯಿಂದ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತ ಜಾಗೃತಿ ಜಾಥಾ ನಡೆಯಿತು   

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ಹೋಟೆಲ್‌ ಮತ್ತು ಬೇಕರಿಗಳಲ್ಲಿ ಆಹಾರ ಪದಾರ್ಥಗಳನ್ನು ಪ್ಯಾಕ್‌ ಮಾಡಲು ಪ್ಲಾಸ್ಟಿಕ್‌ ಹಾಳೆ ಬಳಸಿದರೆ ಅಂತಹ ಹೋಟೆಲ್‌, ಬೇಕರಿಯನ್ನು ಮುಚ್ಚಿಸಲಾಗುವುದು ಎಂದು ತಾ.ಪಂ. ಇಒ ಎನ್‌.ಮುನಿರಾಜು ಹೇಳಿದರು.

 ‘ನಮ್ಮ ಗ್ರಾಮ ಪ್ಲಾಸ್ಟಿಕ್‌ ಮುಕ್ತ ಗ್ರಾಮ, ಗ್ರಾಮದ ನಡೆ ಪ್ಲಾಸ್ಟಿಕ್‌ ನಿಷೇಧದ ಕಡೆ’ ಧ್ಯೆಯದೊಂದಿಗೆ  ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮ ಪಂಚಾಯತಿಯಿಂದ ಆಯೋಜಿಸಿದ್ದ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಫೀ, ಟೀ ಇತ್ಯಾದಿಗಳನ್ನು ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಹಾಕಿದರೆ ಕ್ಯಾನ್ಸರ್‌ಗೆ ಕಾರಣವಾಗಲಿದೆ. ಇಂತಹ ಬಳಕೆಯನ್ನು ಸರ್ಕಾರ ನಿಷೇಧಿಸಿದೆ. ಇದನ್ನು ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು. ಪರಿಸರದ ರಕ್ಷಣೆ ಉದ್ದೇಶದಿಂದ ಏಕ ಬಳಕೆಯ ಪ್ಲಾಸ್ಟಿಕ್‌ ಅನ್ನು ಸಾರ್ವಜನಿಕರು ನಿಲ್ಲಿಸಿ, ಪರಿಸರ ಸಂರಕ್ಷಣೆಗೆ ಸಹಕಾರ ನೀಡಬೇಕು ಎಂದು ಹೇಳಿದರು.

ADVERTISEMENT

ಪ್ಲಾಸ್ಟಿಕ್‌ ವಸ್ತುಗಳು ಭೂಮಿಯಲ್ಲಿ ಕರಗದೆ ಸಾವಿರಾರು ವರ್ಷ ಹಾಗೇ ಉಳಿಯುತ್ತವೆ. ಇದು ಮಣ್ಣು ಆರೋಗ್ಯ ಮತ್ತು ಪರಿಸರವನ್ನು ಹಾಳು ಮಾಡುತ್ತದೆ. ಜಲ ಮೂಲವನ್ನು ಮಾಲಿನ್ಯಗೊಳಿಸುತ್ತದೆ. ಇದನ್ನು ಅರಿತು ಜನರು ಪಾಸ್ಟಿಕ್‌ ಬಳಕೆ ತ್ಯಜಿಸಬೇಕು ಎಂದು ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜಾಗತಿಕವಾಗಿ ಪ್ಲಾಸ್ಟಿಕ್‌ ಮಾಲಿನ್ಯ ಕೊನೆಗೊಳಿಸಲು ಜೂನ್ 5 ರವರೆಗೆ ವಿಶೇಷ ಆಂದೋಲನವನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸಲಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲಾವತಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆದರ್ಶಕುಮಾರ್‌, ಸದಸ್ಯರು, ಸಿಬ್ಬಂದಿ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಮಹಿಳೆಯರು ಇದ್ದರು.

ಗ್ರಾಮದ ನಡೆ ಪ್ಲಾಸ್ಟಿಕ್‌ ನಿಷೇಧದ ಕಡೆ

‘ನಮ್ಮ ಗ್ರಾಮ ಪ್ಲಾಸ್ಟಿಕ್‌ ಮುಕ್ತ ಗ್ರಾಮ ಗ್ರಾಮದ ನಡೆ ಪ್ಲಾಸ್ಟಿಕ್‌ ನಿಷೇಧದ ಕಡೆ’ ಧ್ಯೆಯದೊಂದಿಗೆ  ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮ ಪಂಚಾಯತಿಯಿಂದ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತ ಜಾಗೃತಿ ಜಾಥಾ ನಡೆಯಿತು. ಪ್ಲಾಸ್ಟಿಕ್‌ ತ್ಯಜಿಸೋಣ-ಪರಿಸರ ಉಳಿಸೋಣ ಹಸಿರು ಹಳ್ಳಿ-ಸುಸ್ಥಿರ ಭವಿಷ್ಯ ಎಂಬ ಘೋಷಣೆಯೊಂದಿಗೆ ದೊಡ್ಡಬೆಳವಂಗಲದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಿತು. ಅಂಗಡಿ ಪ್ರಾವಿಜನ್‌ ಸ್ಟೋರ್ ಬೇಕರಿ ಬಟ್ಟೆ ಅಂಗಡಿ ಹೋಟೆಲ್‌‌ ಬೀದಿ ಬದಿ ವ್ಯಾಪಾರಿಗಳು ಮುಂತಾದ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ನಿಷೇಧ ಕುರಿತು ಜನರಲ್ಲಿ ಮೂಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.