ADVERTISEMENT

ಹೊಸಕೋಟೆ: ಮನೆ ಹಾನಿ ಸಂತ್ರಸ್ತರಿಗೆ ಸೂರು- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 13:50 IST
Last Updated 22 ನವೆಂಬರ್ 2021, 13:50 IST
ಹೊಸಕೋಟೆಯ ಅಗಸನ ಕೆರೆ ತುಂಬಿ ಸುತ್ತಮುತ್ತಲಿನ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಸ್ಥಳ ಪರಿಶೀಲಿಸಿದರು. ಸಚಿವ ಎಂ.ಟಿ.ಬಿ. ನಾಗರಾಜ್, ಜಿಲ್ಲಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್‌ ಗೀತಾ ಹಾಜರಿದ್ದರು
ಹೊಸಕೋಟೆಯ ಅಗಸನ ಕೆರೆ ತುಂಬಿ ಸುತ್ತಮುತ್ತಲಿನ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಸ್ಥಳ ಪರಿಶೀಲಿಸಿದರು. ಸಚಿವ ಎಂ.ಟಿ.ಬಿ. ನಾಗರಾಜ್, ಜಿಲ್ಲಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್‌ ಗೀತಾ ಹಾಜರಿದ್ದರು   

ಹೊಸಕೋಟೆ: ‘ರಾಜ್ಯದ ಹಲವಾರು ಭಾಗಗಳಲ್ಲಿ ರಾಜಕಾಲುವೆ ಒತ್ತುವರಿಯಾಗಿದ್ದು ಅದನ್ನು ಗುರುತಿಸಿ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ಕೋಲಾರಕ್ಕೆ ಹೋಗುವ ಮಾರ್ಗಮಧ್ಯೆ ನಗರದ 19ನೇ ವಾರ್ಡ್‌ನ ಅಗಸನಕೆರೆ ತುಂಬಿ ಹೊರಬರುತ್ತಿರುವ ನೀರಿನಿಂದ ತೊಂದರೆಗೊಳಗಾದ ಮನೆಗಳನ್ನು ವೀಕ್ಷಿಸಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಗರದ ಸರ್ಕಾರಿ ಆಸ್ಪತ್ರೆಯ ಹಿಂದಿನ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. ಅಲ್ಲಿನ ಸುಮಾರು 50 ಮನೆಗಳನ್ನು ಸ್ಥಳಾಂತರಿಸಿ ಅವರಿಗೆ ಅಲ್ ಅಮೀನ್ ಕಾಲೇಜಿನಲ್ಲಿ ತಕ್ಷಣಕ್ಕೆ ವಸತಿ ಕಲ್ಪಿಸಿದ್ದು ಅವರ ಮೂಲ ಅವಶ್ಯಕತೆಗಳನ್ನು ಪೂರೈಸಲಾಗುತ್ತಿದೆ. ಇಲ್ಲಿನ ಪರಿಸ್ಥಿತಿ ನೋಡಿಕೊಂಡು ಅವರಿಗೆ ಬೇರೆ ಕಡೆಗಳಲ್ಲಿ ಸ್ಥಳ ಗುರುತಿಸಿ ಬಸವ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಶೀಘ್ರವೇ, ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ರಾಜಕಾಲುವೆಯ ಅಕ್ಕಪಕ್ಕದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಕೆಲವು ಕಡೆಯಲ್ಲಿ ರಾಜಕಾಲುವೆಯೂ ಒತ್ತುವರಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಳೆಯ ನಕ್ಷೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಮಳೆ ಸುರಿದಾಗ ಮನೆಗಳಿಗೆ ನೀರು ನುಗ್ಗಿ ನಮಗೆ ಸಮಸ್ಯೆಯಾಗುತ್ತಿದೆ. ಜೊತೆಗೆ ಮೂಲಸೌಕರ್ಯದ ಕೊರತೆಯಿದೆ. ನಮಗೆ ಶಾಶ್ವತವಾದ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯ ನಾಗರಿಕರು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

‘ಗ್ರಾಮ ನಕ್ಷೆಯಲ್ಲಿ ರಾಜಕಾಲುವೆಯ ಸ್ಥಳ ಗುರುತಿಸಲು ಅಧಿಕಾರಿಗಳು ಮುಂದಾಗಿಲ್ಲ. ಈಗ ಕೆರೆಯ ನೀರು ಹೊರಬರುತ್ತಿದ್ದು ಅದು ಹೊರಗೆ ಹೋಗಲು ಸ್ಥಳ ಇಲ್ಲ. ಅದಕ್ಕಾಗಿ ಈಗಲಾದರೂ ಕೆರೆ ತುಂಬಿದ ನೀರು ಹೊರಗೆ ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು. ಸ್ಥಳೀಯರಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು’ ಎಂದು ಟೌನ್ ಬ್ಯಾಂಕ್ ಉಪಾಧ್ಯಕ್ಷ ಬಾಲಚಂದ್ರ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್, ಜಿಲ್ಲಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್‌ ಗೀತಾ, ನಗರಸಭೆ ಪೌರಾಯುಕ್ತ ರಮೇಶ್, ಅಧ್ಯಕ್ಷ ಅರುಣ್ ಕುಮಾರ್‌, ಸ್ಥಾಯಿಸಮಿತಿ ಅಧ್ಯಕ್ಷ ಸೋಮಶೇಖರ್‌, ಸದಸ್ಯರಾದ ನವೀನ್, ಗ್ಯಾಸ್ ದೇವರಾಜ್, ನಿತಿನ್ ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.