ADVERTISEMENT

ಆನೇಕಲ್: ದೇಶದ ಅಭಿವೃದ್ಧಿಗೆ ಶಿಕ್ಷಣ ಪೂರಕ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 7:04 IST
Last Updated 11 ಜನವರಿ 2022, 7:04 IST
ಆನೇಕಲ್ ತಾಲ್ಲೂಕಿನ ಚೂಡಹಳ್ಳಿಯಲ್ಲಿ ಮಂತ್ರ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಿಸಲಾಯಿತು
ಆನೇಕಲ್ ತಾಲ್ಲೂಕಿನ ಚೂಡಹಳ್ಳಿಯಲ್ಲಿ ಮಂತ್ರ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಿಸಲಾಯಿತು   

ಆನೇಕಲ್: ‘ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಕಾಡಾಂಚಿನ ಗ್ರಾಮವಾಗಿರುವ ಚೂಡಹಳ್ಳಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಂಘ, ಸಂಸ್ಥೆಗಳು ನೆರವು ನೀಡಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆದೂರು ಪ್ರಕಾಶ್‌ ತಿಳಿಸಿದರು.

ತಾಲ್ಲೂಕಿನ ಚೂಡಹಳ್ಳಿಯಲ್ಲಿ ಮಂತ್ರ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಿಸಿಅವರು ಮಾತನಾಡಿದರು.

ಕೊರೊನಾದಿಂದ ಶಾಲೆಗಳು ಮುಚ್ಚಿವೆ. ಹಾಗಾಗಿ, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಪರ್ಯಾಯ ಶಿಕ್ಷಣ ನೀಡಲು ಅವಶ್ಯಕವಿರುವ ಟ್ಯಾಬ್‌ಗಳು ಸೇರಿದಂತೆ ತಾಂತ್ರಿಕ ಪರಿಕರಗಳನ್ನು ವಿತರಿಸುವ ನಿಟ್ಟಿನಲ್ಲಿ ಸಂಸ್ಥೆಗಳು ನೆರವಾಗಬೇಕು ಎಂದು ಹೇಳಿದರು.

ADVERTISEMENT

ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದೇ ಶಿಕ್ಷಣ ಪಡೆಯಲು ಸಾಧ್ಯ. ಇಲ್ಲವಾದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ನಡುವೆ ಕಂದಕ ಸೃಷ್ಟಿಯಾಗುತ್ತದೆ. ಹಾಗಾಗಿ, ಶೈಕ್ಷಣಿಕ ಸೌಲಭ್ಯಗಳು ಎಲ್ಲರಿಗೂ ಸಮನಾಗಿ ದೊರೆಯುವಂತಾಗಬೇಕು ಎಂದು ಆಶಿಸಿದರು.

ವಕೀಲ ವಿಜಯಕುಮಾರ್‌ ಮಾತನಾಡಿ, ಎಲ್ಲರಿಗೂ ಸಮಾನ ಶಿಕ್ಷಣ ದೊರೆಯುವಂತಾಗಬೇಕು. ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಹಾಗಾಗಿ, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ದೇಶದ ಭವಿಷ್ಯ ಶಾಲೆಗಳಲ್ಲಿ ರೂಪಿತವಾಗುತ್ತದೆ ಎಂಬ ಮಾತಿದೆ. ಹಾಗಾಗಿ, ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯ ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದರು.

ವಕೀಲ ಸಂಪತ್‌, ಮುಖ್ಯೋಪಾಧ್ಯಾಯ ಹನುಮಂತ ಪೂಜಾರಿ, ಮಂತ್ರ ಪ್ರತಿಷ್ಠಾನದ ಸಿದ್ದರಾಜು, ಪ್ರದೀಪ್‌, ಮುಖಂಡರಾದ ನಾರಾಯಣರಾಜು, ಚಿನ್ನಪ್ಪ, ಚಂದ್ರಪ್ಪ, ನರಸಿಂಹ, ಕಾಳಪ್ಪ, ಸುನಂದಮ್ಮ, ಪ್ರಭಾಪತಿ, ಲಕ್ಷ್ಮಮ್ಮ, ಅಂಕಮ್ಮ, ರಾಧಾ, ಕಾಡಮ್ಮ, ಸವಿತಾ, ರಾಜೇಶ್ವರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.