ADVERTISEMENT

ಚನ್ನರಾಯಪಟ್ಟಣ: 70 ರೈತರ ಮೇಲೆ ದೂರು ದಾಖಲು

ಸರ್ಕಾರದಿಂದ ಹೋರಾಟ ಹತ್ತಿಕ್ಕಲು ಯತ್ನ: ಹೋರಾಟಗಾರರ ಆರೋಪ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 5:08 IST
Last Updated 18 ಆಗಸ್ಟ್ 2022, 5:08 IST
ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 136ನೇ ದಿನದಂದು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು
ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 136ನೇ ದಿನದಂದು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು   

ಚನ್ನರಾಯಪಟ್ಟಣ(ವಿಜಯಪುರ):ಭೂಮಿ ಕಿತ್ತುಕೊಳ್ಳುವ ಉದ್ದೇಶದಿಂದ ರೈತರನ್ನು ಬಂಧಿಸಿ ನ್ಯಾಯಯುತವಾದ ಹೋರಾಟ ಹತ್ತಿಕ್ಕಲು 70ಕ್ಕೂ ಹೆಚ್ಚು ಮಂದಿಯ ಮೇಲೆ ಕೇಸು ದಾಖಲಿಸಿದ್ದಾರೆ. ಸರ್ಕಾರ ಯಾವುದೇ ತಂತ್ರಗಾರಿಕೆ ಅನುಸರಿಸಿದರೂ ಹೋರಾಟ ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಸಚಿವ ಡಾ.ಕೆ. ಸುಧಾಕರ್ ಅವರಂತಹ ನೂರಾರು ಸಚಿವರು ಬಂದರೂ ಪ್ರಾಣವನ್ನಾದರೂ ಬಿಡ್ತೇವೆ. ಒಂದಿಂಚು ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರು ಹೇಳಿದರು.

ಚನ್ನರಾಯಪಟ್ಟಣದಲ್ಲಿ ನಡೆಯು ತ್ತಿರುವ 136ನೇ ದಿನದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡಿದ್ದ ಅವರು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿದರು.

ಸಂವಿಧಾನದಡಿ ಭೂಮಿ ಹೊಂದಲು ನಮಗೆ ಹಕ್ಕಿದೆ. ದುಡಿದು ತಿನ್ನಲು ಇರುವ ಭೂಮಿ ಕಿತ್ತುಕೊಂಡು ನಮ್ಮನ್ನೆಲ್ಲಾ ಬೀದಿಪಾಲು ಮಾಡಲು ಸರ್ಕಾರಿ ಪ್ರಾಯೋಜಿತ ಪೊಲೀಸ್ ಅಧಿಕಾರಿಗಳು ಕೆಐಎಡಿಬಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ರೈತರ ಪರವಾಗಿದ್ದೇವೆ ಎಂದು ಹೇಳುವ ಇವರ ಚಿಂತನೆಗಳು ನೈಜವಾಗಿರುವುದಿಲ್ಲ. ನಕಲಿ ರೈತ ಪ್ರೇಮವಾಗಿದೆ. ಅಮಾಯಕರಾಗಿರುವ ರೈತರ ಬೆನ್ನಿಗೆ ಪೊಲೀಸರು ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಸ್ವಾತಂತ್ರ್ಯೋತ್ಸವಕ್ಕೂ ಮುನ್ನಾ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದು ಪ್ರತಿಭಟನೆ ಮಾಡದಂತೆ ಮನವಿ ಮಾಡಿಕೊಂಡಿದ್ದರು. ರಾಷ್ಟ್ರೀಯ ಹಬ್ಬದಂದು ಮೌನ ಪ್ರತಿಭಟನೆಯನ್ನು ಕೈಬಿಡೋಣ ಎಂದು ತೀರ್ಮಾನ ಮಾಡಿಕೊಂಡಿದ್ದೆವು. ಎಲ್ಲಾ ರೈತರಿಗೂ ಮಾಹಿತಿ ನೀಡಿದ್ದೆವು. ಆದರೂ, ರಾತ್ರಿ ವೇಳೆ ರೈತರನ್ನು ಬಲವಂತವಾಗಿ ಬಂಧಿಸಿದ್ದರಿಂದ ನಾವು ದೇವನಹಳ್ಳಿಯಲ್ಲಿ ಪ್ರತಿಭಟನೆ ಮಾಡಬೇಕಾಯಿತು ಎಂದು‌ಹೋರಾಟಗಾರ ನಂಜಪ್ಪ ತಿಳಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಯಾರೊ ಬ್ಬರೂ ಕಪ್ಪುಪಟ್ಟಿ ಧರಿಸಿರಲಿಲ್ಲ. ರಾಷ್ಟ್ರೀಯ ಹಬ್ಬಕ್ಕೆ ಅಗೌರವ ತೋರಿಸಿರಲಿಲ್ಲ. ರಾಷ್ಟ್ರಧ್ವಜಗಳನ್ನಷ್ಟೇ ಹಿಡಿದುಕೊಂಡು ಹೋಗಿದ್ದೆವು. ಆದರೆ, ನಮ್ಮನ್ನು ತಡೆಯುವ ಭರದಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದ್ದು, ಪೊಲೀಸರು. ರೈತರ ಮೇಲೆ ಹಲ್ಲೆ ನಡೆಸಿದರು. ರಸ್ತೆಗಳಲ್ಲಿ ಎಳೆದಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರ ಶ್ರೀನಿವಾಸ್ ಮಾತನಾಡಿ, ರೈತರನ್ನು ಬಂಧಿಸಿ ಅವರಿಗೆ ಭಯ ಹುಟ್ಟಿಸಿ ಹೋರಾಟದ ಸ್ಥಳದಿಂದ ಅವರನ್ನು ಖಾಲಿ ಮಾಡಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿಯೇ ರೈತರನ್ನು ಬಂಧಿಸಿದ್ದಾರೆ ಎಂದು ಟೀಕಿಸಿದರು.

ರೈತರು ಕಪ್ಪುಪಟ್ಟಿ ಕಟ್ಟಿಕೊಂಡು ಹೋರಾಟ ಮಾಡುತ್ತಾರೋ ಇಲ್ಲವೋ ಎಂಬ ಮಾಹಿತಿಯು ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಇರಲಿಲ್ಲವೇ. ಸತ್ಯಾಸತ್ಯತೆ ತಿಳಿದುಕೊಂಡು ರೈತರ ತಂಟೆಗೆ ಬರಬೇಕಾಗಿತ್ತು. ಅವರಿಗೆ ಸತ್ಯ ಬೇಕಾಗಿರಲಿಲ್ಲ. ರೈತರನ್ನು ಬಂಧಿಸುವುದೊಂದೇ ಅವರ ಉದ್ದೇಶವಾಗಿತ್ತು. ರೈತರ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ. ರಾಜ್ಯದಾದ್ಯಂತ ರೈತಪರ ಸಂಘಟನೆಗಳು ಸೇರಿದಂತೆ ದಲಿತ ಪರ ಸಂಘಟನೆಗಳು, ಮಹಿಳಾ ಸಂಘಟನೆಗಳೊಂದಿಗೆ ಬೃಹತ್ ಹೋರಾಟ ರೂಪಿಸಲಾಗುತ್ತದೆ ಎಂದರು.

13 ಹಳ್ಳಿಗಳ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.