ADVERTISEMENT

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮ ಮಳೆ, ಬೆಳೆ

ಕಳೆದ ವರ್ಷಕ್ಕಿಂತ ಶೇ 4ರಷ್ಟು ಹೆಚ್ಚು ಬಿತ್ತನೆ, ವಾಡಿಕೆಗಿಂತ 26 ಮಿ.ಮೀ ಅಧಿಕ ಮಳೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 13:28 IST
Last Updated 8 ಅಕ್ಟೋಬರ್ 2019, 13:28 IST
ಗ್ರಾಮಾಂತರ ಜಿಲ್ಲೆಯ ರೈತರೊಬ್ಬರ ಹೊಲದಲ್ಲಿ ಬೆಳೆದಿರುವ ರಾಗಿ ಬೆಳೆ
ಗ್ರಾಮಾಂತರ ಜಿಲ್ಲೆಯ ರೈತರೊಬ್ಬರ ಹೊಲದಲ್ಲಿ ಬೆಳೆದಿರುವ ರಾಗಿ ಬೆಳೆ   

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ 88 ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಲೋಚನ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ನೀರಾವರಿ ಮತ್ತು ಖುಷ್ಕಿ ಸೇರಿ 60,403 ಹೆಕ್ಟೇರ್ ಕೃಷಿ ಬಿತ್ತನೆ ಗುರಿ ಪೈಕಿ 53,366 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಶೇ 84ರಷ್ಟು ಆಗಿತ್ತು. ಈ ಬಾರಿ ಶೇ 4ರಷ್ಟು ಹೆಚ್ಚು ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ವಾರ್ಷಿಕವಾಡಿಕೆ ಮಳೆ ಮುಂಗಾರು ಹಂಗಾಮು ಜನವರಿ ಇಂದ ಅ. 4ರವರೆಗೆ 616 ಮಿ.ಮೀ. ಆಗಿದೆ. ಪ್ರಸ್ತುತ ಸುರಿದಿರುವ ಪ್ರಮಾಣ 642 ಮಿ.ಮೀ. ಆಗಿದ್ದು ವಾಡಿಕೆಗಿಂತ 26 ಮಿ.ಮೀ. ಹೆಚ್ಚು ಸುರಿದಿದೆ. ಈಗಾಗಲೇ ಸೆ. 30ಕ್ಕೆ ಮುಂಗಾರು ಹಂಗಾಮು ಮುಕ್ತಾಯವಾಗಿದ್ದು, ಹಿಂಗಾರು ಹಂಗಾಮಿನಲ್ಲಿ ಹುರುಳಿ ಬಿತ್ತನೆ ಮಾಡಲು ಮತ್ತು ನವೆಂಬರ್ ಅಂತಿಮ ವಾರ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಕಡಲೆ ಬಿತ್ತನೆಗೆ ಸಕಾಲವಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ADVERTISEMENT

ಜಿಲ್ಲೆಯಲ್ಲಿರುವ ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಚಟುವಟಿಕೆಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಬೆಳೆಗಳಆಕಸ್ಮಿಕ ರೋಗ ಮತ್ತು ಕೀಟಗಳ ಬಗ್ಗೆ ಕೃಷಿ ಅಧಿಕಾರಿಗಳಿಗೆತಕ್ಷಣ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ಗೊಬ್ಬರದ ಕೊರತೆ ಇಲ್ಲ ಎಂದು ಇಲಾಖೆ ತಿಳಿಸಿದೆ.

ಕಳೆದ ಆರೇಳು ದಿನಗಳಿಂದ ದೇವನಹಳ್ಳಿ ತಾಲ್ಲೂಕಿನಲ್ಲಿ ಮಳೆ ಸುರಿಯುತ್ತಿದ್ದು, ಪೂರಕವಾಗಿ ರಾಗಿ ಪೈರಿಗೆ ಯೂರಿಯಾ ಬೇಡಿಕೆ ಹೆಚ್ಚುವ ಮಾಹಿತಿ ಇದೆ. ತಾಲ್ಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ 13 ಸಹಕಾರ ಸಂಸ್ಥೆಗಳು ಮತ್ತು 14 ಖಾಸಗಿ ಸಂಸ್ಥೆಗಳಲ್ಲಿ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇವಣ್ಣ ಮನಗೋಳಿ ತಿಳಿಸಿದರು.

2019ರ ಮಾಹೆಯಲ್ಲಿ ವಿವಿಧ ರಸಗೊಬ್ಬರ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ ಪೊಟಾಷ್ 111.25 ಟನ್, ಡಿ.ಎ.ಪಿ. 424.5 ಟನ್, ಕಾಂಪ್ಲೆಕ್ಸ್ 689.05 ಟನ್, ಎಸ್.ಎಸ್.ಪಿ. 1527 ಟನ್, ಅಮೋನಿಯಂ ಸಲ್ಫೇ‌ಟ್ 31.25 ಟನ್, ಯೂರಿಯಾ 14 ಟನ್ ಇದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.