ಆನೇಕಲ್: ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗುವುದರಿಂದ ಗ್ರಾಮ ಪಂಚಾಯಿತಿಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಯಮರೆ ಜಯಶಂಕರ್ ಹೇಳಿದರು.
ತಾಲ್ಲೂಕಿನ ಯಮರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಮೊದಲನೇ ಸುತ್ತಿನ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಯಿಂದ ಸರ್ಕಾರದ ಸೌಲಭ್ಯಗಳು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪುತ್ತಿತ್ತು. ಆದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ 30,000 ಜನಸಂಖ್ಯೆಗೆ ಒಬ್ಬ ಸದಸ್ಯ ಆಯ್ಕೆಯಾಗಲಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳ ಆಯ್ಕೆ ಮತ್ತು ಸರ್ಕಾರದ ಸೌಲಭ್ಯಗಳು ನಿಗದಿತ ಸಮಯದಲ್ಲಿ ದೊರೆಯುವುದು ಕಷ್ಟ ಆಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬಗ್ಗೆ ಸರ್ಕಾರ ಮರುಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಸುಲೋಚನಾ ರವಿಕುಮಾರ್, ಗ್ರಾಮ ಸಭೆಗಳಲ್ಲಿ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳುವುದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ತಿಳಿಸಲು ಸಾಧ್ಯವಾಗುತ್ತದೆ. ಹಾಗಾಗಿ ಗ್ರಾಮಸ್ಥರು ಗ್ರಾಮ ಸಭೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರು ಗ್ರಾಮಸಭೆಯಲ್ಲಿ ಪಾಲ್ಗೊಂಡು ರಸ್ತೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುಂತೆ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು.
ಖಾತೆಗಳ ಸಮಸ್ಯೆ, ಗ್ರಾಮಗಳಿಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಸಾರ್ವಜನಿಕರು ಅಧಿಕಾರಿಗಳನ್ನು ಒತ್ತಾಯಿಸಿದರು. ಗ್ರಾಮಸಭೆಯಲ್ಲಿ ಅಂಗವಿಕಲರಿಗೆ ಸಾಧನಾ ಸಲಕರಣೆ, ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೀಣಾ ಯುಗಂದರ್ ಸಿಂಗ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರವೀಣ್, ಸಿಬ್ಬಂದಿ ಪ್ರಸಾದ್, ಪಾಪರೆಡ್ಡಿ, ನಾರಾಯಣಸ್ವಾಮಿ ಇದ್ದರು.
ರಾಜಕೀಯ ಲಾಭಕ್ಕಾಗಿ ಪ್ರಾಧಿಕಾರ
ಗ್ರಾಮ ಪಂಚಾಯಿತಿಗಳ ಆದಾಯ ಹೆಚ್ಚಿರುತ್ತದೆ. ಆದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಸರ್ಕಾರದ ಅನುದಾನ ಕಡಿಮೆ ದೊರೆಯುತ್ತದೆ. ರಾಜಕೀಯ ಲಾಭಕ್ಕಾಗಿ ಗ್ರೇಟರ್ ಬೆಂಗಳೂರು ಮಾಡಲಾಗಿದೆ. ಇದರಿಂದಾಗಿ ರಾಜಕಾರಣಿಗಳಿಗೆ ಲಾಭವೇ ಹೊರತು ಸಾರ್ವಜನಿಕರಿಗೆ ಲಾಭವಿಲ್ಲ ಎಂದು ಗ್ರಾ.ಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.