ADVERTISEMENT

ಶಿಬಿರದ ಅನುಭವ ಜೀವನಕ್ಕೆ ಮಾರ್ಗದರ್ಶಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 14:18 IST
Last Updated 9 ಅಕ್ಟೋಬರ್ 2019, 14:18 IST
ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು   

ದೇವನಹಳ್ಳಿ: ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಡೆದ ಹತ್ತಾರು ದಿನಗಳ ಶಿಬಿರದಲ್ಲಿ ಅನುಭವದ ಕೆಲಸಗಳು ಮೌಲ್ಯಯುತ ಜೀವನಕ್ಕೆ ಮಾರ್ಗದರ್ಶಿಯಾಗಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜನಜಾಗೃತಿ ಘಟಕ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಸುಣ್ಣಘಟ್ಟ ಸರ್ಕಾರಿ ಶಾಲೆ ಆವರಣದಲ್ಲಿ ಮಾರಸಂದ್ರ ಪಿ.ಕೆ.ಬಿ. ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಗ್ರಾಮದಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ಪರಿಸರದ ಜಾಗೃತಿ, ಅನಕ್ಷರಸ್ಥರಿಗೆ ಅಕ್ಷರ ಜ್ಞಾನ, ಕೃಷಿ ಮತ್ತು ತೋಟಗಾರಿಕೆಯಲ್ಲಿ ರೈತರ ಸಂಕಷ್ಟಗಳು, ಶುದ್ಧ ಕುಡಿಯುವ ನೀರಿನ ಮಹತ್ವ, ಸ್ಥಳೀಯ ಕಲೆ ಮತ್ತು ಸಂಸ್ಕೃತಿ, ಗ್ರಾಮೀಣ ಸೊಗಡಿನ ಪರಿಪೂರ್ಣ ಚಿತ್ರಣವನ್ನು ಅರಿತು ಅವುಗಳನ್ನು ಸ್ಥಳೀಯರಿಗೆ ತಿಳಿಸಿಕೊಟ್ಟಿರುವುದು ಸ್ಥಳೀಯರಿಗೆ ವಿವಿಧ ರೀತಿಯ ಅನುಕೂಲವಾಗಿದೆ. ಜೊತೆಗೆ ನಿಮಗೂ ಅರ್ಥವಾಗಿದೆ. ಇಂತಹ ಶಿಬಿರಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ನಡೆಯಬೇಕು’ ಎಂದು ಹೇಳಿದರು.

ADVERTISEMENT

ಅಸ್ಪೃಶ್ಯತೆ, ಜಾತಿ, ಮತ, ಧರ್ಮ ಸೋಂಕಿಲ್ಲದೆ ಪರಸ್ಪರ ವಿಶ್ವಾಸ, ನಂಬಿಕೆ, ಸಹೋದರತ್ವ, ಮಾನವೀಯ ಮೌಲ್ಯ, ಸಾಮಾಜಿಕ ಸೇವೆಗಳ ಬಗ್ಗೆ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಗುರುಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು.

ಪ್ರಸ್ತುತ ಶಿಬಿರದ ನೆನಪಿಗಾಗಿ ಪ್ರತಿಯೊಬ್ಬ ಶಿಬಿರಾರ್ಥಿಗಳು ಒಂದೊಂದು ಸಸಿ ಬೆಳೆಸಿ ಪ್ರಕೃತಿಯ ಮಡಿಲಿಗೆ ಕಾಣಿಕೆಯಾಗಿ ನೀಡಿ ಸಾರ್ಥಕ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಯಿತು. ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ವೆಂಕಟೇಶ್ ಮಾತನಾಡಿದರು. ಮುಖಂಡರಾದ ಸಿ. ರಾಮಯ್ಯ, ಡಾ.ಆಂಜಿನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಪಿಳ್ಳಮ್ಮ, ಸದಸ್ಯ ಮರಿಯಪ್ಪ, ಮೀನಾ, ಮುಖ್ಯ ಶಿಕ್ಷಕ ಮಾರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.