ADVERTISEMENT

ಹೊಸಕೋಟೆ: ಶರತ್ ಕಾಂಗ್ರೆಸ್ ಹಾದಿ ಸುಗಮ

ಹೊಸಕೋಟೆ ತಾಲ್ಲೂಕು ಕಾಂಗ್ರೆಸ್‌ ಸಮಿತಿ ಒಮ್ಮತದ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 4:12 IST
Last Updated 5 ನವೆಂಬರ್ 2020, 4:12 IST
ಹೊಸಕೋಟೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು
ಹೊಸಕೋಟೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು   

ಹೊಸಕೋಟೆ: ಹೊಸಕೋಟೆಯ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್‌ ಸೇರ್ಪಡೆಯಾಗಲು ತಾಲ್ಲೂಕು ಕಾಂಗ್ರೆಸ್‌ ಘಟಕ ಬುಧವಾರ ಒಮ್ಮತದಿಂದ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಶರತ್‌ ಕಾಂಗ್ರೆಸ್‌ ಸೇರ್ಪಡೆಯ ಹಾದಿ ಸುಗಮವಾದಂತಾಗಿದೆ.

‘ಹೊಸಕೋಟೆಯಲ್ಲಿ ಬುಧವಾರ ನಡೆದ ತಾಲ್ಲೂಕು ಕಾಂಗ್ರೆಸ್ ಸಭೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಶೀಘ್ರ ಕೆಪಿಸಿಸಿಗೆ ವರದಿ ಸಲ್ಲಿಸಲಾಗುವುದು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುನಿಶಾಮಣ್ಣ ತಿಳಿಸಿದ್ದಾರೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶರತ್‌ ಬಚ್ಚೇಗೌಡ ಅವರು ತಮ್ಮ ರಾಜಕೀಯ ಎದುರಾಳಿ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್‌ ವಿರುದ್ಧ ಜಯಗಳಿಸಿದ್ದರು.

ADVERTISEMENT

ಚಿಕ್ಕಬಳ್ಳಾಪುರದ ಬಿಜೆಪಿ ಸಂಸದರಾಗಿರುವ ಶರತ್‌ ತಂದೆ ಬಿ.ಎನ್‌. ಬಚ್ಚೇಗೌಡ ಕೂಡ ಮಗನ ಕಾಂಗ್ರೆಸ್‌ ಸೇರ್ಪಡೆಗೆ ಹಸಿರು ನಿಶಾನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಬಲಿಷ್ಠ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತಿರುವರಂಗ ನಾರಾಯಣಸ್ವಾಮಿ ಮಾತನಾಡಿ, ‘ತಾಲ್ಲೂಕಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಪಕ್ಷವನ್ನು ಮುನ್ನಡೆಸಲು ಸಾಮರ್ಥ್ಯ ಇರುವವರು ಇದ್ದಾರೆ. ಅವರ ಜೊತೆಗೆ ಶರತ್ ಬಚ್ಚೇಗೌಡ ಸೇರಿಕೊಂಡರೆ ಇನ್ನಷ್ಟು ಬಲ ದೊರೆಯಲಿದೆ. ಸ್ಥಳೀಯವಾಗಿ ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಅವರನ್ನು ಎದುರಿಸಲು ಸಹಕಾರಿ
ಯಾಗಲಿದೆ’ ಎಂದರು.

‘ಎಂ.ಟಿ.ಬಿ. ನಾಗರಾಜ್ ತಾಲ್ಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಿಜೆಪಿ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸುತ್ತಿದ್ದಾರೆ’ ಎಂದು
ದೂರಿದರು.

ಜಿಲ್ಲಾ ಪಂಚಾಯಿತಿಮಾಜಿ ಅಧ್ಯಕ್ಷ ವಿ. ಪ್ರಸಾದ್ ಮಾತನಾಡಿ, ಕೆಪಿಸಿಸಿ ಯಾವುದೇ ನಾಯಕರನ್ನು ತಾಲ್ಲೂಕಿನಲ್ಲಿ ಚುನಾವಣೆಗೆ ನಿಲ್ಲಿಸಿದರೂ ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಮುಖಂಡ ಲಕ್ಕೊಂಡಹಳ್ಳಿ ಪ್ರಸಾದ್ ಮಾತನಾಡಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಟಿ. ಹೇಮಂತಕುಮಾರ್‌, ರವೀಂದ್ರ, ತಾಲ್ಲೂಕು ಕಾರ್ಯದರ್ಶಿ ಮಂಜುನಾಥ್, ಮುಖಂಡರಾದ ಪಿಳ್ಳಣ್ಣ, ಭಕ್ತರಹಳ್ಳಿ ಕುಮಾರ್, ಶಿವಕುಮಾರ್‌, ತಾ.ರಾ. ವೆಂಕಟೇಶ್, ಹರಳೂರು ರವಿ, ಬಚ್ಚೇಗೌಡ, ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.