ADVERTISEMENT

ಕುಗ್ಗಿದ ಮಹಿಳೆಗೆ ಬೇಕು ಸಾಂತ್ವನ; ಮಹಿಳೆ, ಮಕ್ಕಳ ರಕ್ಷಣೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:27 IST
Last Updated 16 ಮೇ 2025, 16:27 IST
ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ರಕ್ಷಣಾ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು
ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ರಕ್ಷಣಾ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು   

ಸೂಲಿಬೆಲೆ(ಹೊಸಕೋಟೆ): ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿರುವ ಮಹಿಳೆಯರಿಗೆ ಸಾಂತ್ವಾನ ಕೇಂದ್ರದ ಮೂಲಕ ಅತ್ಮಸ್ಥರ್ಯ ತುಂಬಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೌಟುಂಬಿಕವಾಗಿ ದೌರ್ಜನ್ಯ ಮತ್ತು ಹೊಂದಾಣಿಕೆ ಸಮಸ್ಯೆ ಎದುರಾದ ಸಮಯದಲ್ಲಿ ಒಂದುಗೂಡಿಸುವುದು ಆಧ್ಯತೆಯಾಗಿದೆ ಎಂದು ಸಮಾಜಿಕ ಕಾರ್ಯಕರ್ತೆ ರಮ್ಯಾ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ, ಸಾಂತ್ವನ ಮಹಿಳಾ ಸಹಾಯವಾಣಿ ಸಹಯೋಗದಲ್ಲಿ ಗುರುವಾರ ತಾಲ್ಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಕುರಿತು ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಮುಖಾಮುಖಿ ಆಪ್ತ ಸಮಾಲೋಚನೆ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಸಂಕಷ್ಟದಲ್ಲಿರುವ ಮಹಿಳೆಯರಿಗೆ ಅಶ್ರಯ ನೀಡುವ ಸಲುವಾಗಿ ತಾಲ್ಲೂಕು ಮಟ್ಟದಲ್ಲಿ ‘ಸಾದರ ಕೇಂದ್ರ’ ಹಾಗೂ ಜಿಲ್ಲಾ ಮಟ್ಟದಲ್ಲಿ ‘ಸಖಿ ಕೇಂದ್ರ’ದಲ್ಲಿ ಆಶ್ರಯ ನೀಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಪಿ.ಸಂಗೀತಾ, ಹಲವು ಮಹನೀಯರ ಹೋರಾಟದ ಫಲವಾಗಿ ದೇಶದಲ್ಲಿ ಮಹಿಳೆ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಇದೇ ಹಾದಿಯಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಜ್ಞಾನ ಸಂಪಾದಿಸಿ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರೇಣುಕಾ ಕೌಚಗೇರಿ, ವಿದ್ಯಾರ್ಥಿಗಳು ದೇಶದ ಆಸ್ತಿ. ವಿದ್ಯಾರ್ಥಿ ದಿಸೆಯಲ್ಲೇ ತಾವು  ಸಾಮಾಜಿಕ ಜವಾಬ್ದಾರಿ ನಿಭಾಯಿಸುವ ರಾಯಭಾರಿಗಳಾಗಬೇಕು. ದೇಶದ ಗೌರವ ಘನತೆಯನ್ನು ಎತ್ತಿ ಹಿಡಿಯುವ ಕಾನೂನು ಮತ್ತು ಕಾಯ್ದೆಗಳನ್ನು ಗೌರವಿಸುವ ಕೆಲಸವಾಗಬೇಕು ಎಂದರು.

ಸರ್ವೋದಯ ಆಶ್ರಯ ಕೇಂದ್ರದ ಸಮಾಜಿಕ ಕಾರ್ಯಕರ್ತೆ ನಾಗವೇಣಿ, ಪೋಲಿಸ್ ಇಲಾಖೆಯ ಬಸಪ್ಪ, ಮೈತ್ರಿ ಮಾತನಾಡಿದರು.

ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಬೆಟ್ಟಹಳ್ಳಿ ಗೋಪಿನಾಥ್, ಕಾಲೇಜಿನ ಪ್ರಾಧ್ಯಾಪಕ ವರ್ಗ ಹಾಜರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.