ADVERTISEMENT

‘ಇಲ್ಲದಿದ್ದರೆ ಕಟ್ಟಡ ಪರವಾನಗಿ ರದ್ದು’

ಮಳೆ ನೀರು ಸಂಗ್ರಹ ವ್ಯವಸ್ಥೆ ಶೀಘ್ರ ಅಳವಡಿಸಿಕೊಳ್ಳಲು ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಮೇ 2019, 13:33 IST
Last Updated 26 ಮೇ 2019, 13:33 IST
ಕಲ್ಯಾಣ ಮಂದಿರ, ಚಿತ್ರಮಂದಿರಗಳ ಮಾಲೀಕರ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಆರ್. ಮಂಜುನಾಥ್ ಮಾತನಾಡಿದರು
ಕಲ್ಯಾಣ ಮಂದಿರ, ಚಿತ್ರಮಂದಿರಗಳ ಮಾಲೀಕರ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಆರ್. ಮಂಜುನಾಥ್ ಮಾತನಾಡಿದರು   

ದೊಡ್ಡಬಳ್ಳಾಪುರ: ನಗರಸಭೆ ನಿಗದಿಪಡಿಸಿರುವ ಹೆಚ್ಚಿನ ಅಳತೆಯ ಕಟ್ಟಡಗಳ ಮಾಲೀಕರು ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಟ್ಟಡ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಆರ್. ಮಂಜುನಾಥ್ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ನಡೆದ ಕಲ್ಯಾಣ ಮಂದಿರ, ಚಿತ್ರಮಂದಿರಗಳ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಪ್ರಮುಖ ಕಲ್ಯಾಣ ಮಂದಿರ, ಚಿತ್ರಮಂದಿರಗಳು ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಂಡಿರುವ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದರು.

ADVERTISEMENT

ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳುವಂತೆ ಈಗಾಗಲೇ ನೊಟೀಸ್‍ಗಳನ್ನು ನೀಡಲಾಗಿದೆ. ಇನ್ನೂ ಕೆಲ ಕಟ್ಟಡದ ಮಾಲೀಕರು ಮಳೆ ನೀರು ಕೊಯ್ಲು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಕೆಲ ಕಟ್ಟಡದ ಮಾಲೀಕರು ಕಟ್ಟಡದ ಅಳತೆಗೆ ಅನುಗುಣವಾಗಿ ವ್ಯವಸ್ಥೆ ಮಾಡಿಕೊಳ್ಳದಿರುವುದು ಕಂಡು ಬಂದಿದೆ. ಇದನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದರು. ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳದೇ ಇರುವವರು ಶೀಘ್ರದಲ್ಲಿಯೇ ಅಳವಡಿಸಿಕೊಳ್ಳದಿದ್ದರೆ ಕಟ್ಟಡದ ಪರವಾನಗಿ ರದ್ದಾಗಲಿದೆ ಎಂದರು.

ಆಷಾಢದಲ್ಲಿ ಮಾಸದಲ್ಲಿ ಮಾಡಿಸುತ್ತೇವೆ: ಸಭೆಯಲ್ಲಿ ಹಾಜರಿದ್ದ ಕಲ್ಯಾಣ ಮಂದಿರಗಳ ಮಾಲೀಕರು, ಈಗ ಕಲ್ಯಾಣ ಮಂದಿರಗಳಲ್ಲಿ ಮದುವೆ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಮದುವೆಗಳು ಮೂರ್ನಾಲ್ಕು ತಿಂಗಳ ಹಿಂದೆಯೇ ಬುಕಿಂಗ್ ಆಗಿರುವುದರಿಂದ ಕಟ್ಟಡದ ಕೆಲಸ ಮಾಡಿಸಲು ಅನಾನುಕೂಲವಾಗುತ್ತದೆ ಎಂದರು.

ಜುಲೈ ತಿಂಗಳ ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಶುಭಕಾರ್ಯಗಳಿಲ್ಲದೇ ಇರುವುದರಿಂದ ಸಂಪ್ ನಿರ್ಮಿಸಲು ಹಾಗೂ ಕಟ್ಟಡದ ದುರಸ್ತಿ ಮಾಡಿಸಲು ಅನುಕೂಲವಾಗಿದ್ದು, ಅಲ್ಲಿಯವರೆಗೂ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಕೆಲವು ಕಟ್ಟಡಗಳ ಮಾಲೀಕರು ಸಂಪ್ ನಿರ್ಮಿಸಲು ಸ್ಥಳಾವಕಾಶದ ಕೊರತೆ, ವಾಸ್ತು ದೋಷದ ಸಮಸ್ಯೆಗಳನ್ನು ಮುಂದಿಟ್ಟರು. ದೊಡ್ಡ ಕಟ್ಟಡಗಳಲ್ಲಿ ಶೀಟ್‍ಗಳ ಸಮೀಪ ಈ ಕಾಮಗಾರಿ ಮಾಡಿಸಲು ತಾಂತ್ರಿಕ ಸಮಸ್ಯೆಯಾಗುತ್ತದೆ ಎಂದು ಹೇಳಿಕೊಂಡರು.

ಈ ಕುರಿತು ಪ್ರತಿಕ್ರಿಯಿಸಿದ ಪೌರಾಯುಕ್ತರು ಈಗಾಗಲೇ ಜಿಲ್ಲಾಧಿಕಾರಿಗಳು ನಾಲ್ಕು ತಾಲ್ಲೂಕಿನ ನಗರಸಭೆ ವ್ಯಾಪ್ತಿಯಲ್ಲೂ 30–40 ಕ್ಕಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಕಟ್ಟಡಗಳು, ಕೈಗಾರಿಕಾ ಪ್ರದೇಶದ ಕಟ್ಟಡ ಸೇರಿದಂತೆ ಎಲ್ಲರೂ ಸಹ ಮಳೆ ನೀರು ಸಂಗ್ರಹ ಮಾಡಿಕೊಳ್ಳುವಂತೆ ನೊಟೀಸ್ ನೀಡಿ ಸಭೆಗಳನ್ನು ನಡೆಸಲಾಗಿದೆ. ತೀರಾ ಅನಿವಾರ್ಯವಾದರೆ ಸಮಯಾವಕಾಶ ನೀಡಲಾಗುವುದು. ಆದರೆ ಹೆಚ್ಚು ವಿಳಂಬ ಮಾಡದೇ ಮಳೆ ನೀರು ಸಂಗ್ರಹ ಮಾಡಿಕೊಳ್ಳುವ ಸೌಲಭ್ಯವನ್ನು ಮಾಡಿಕೊಳ್ಳುವಂತೆ ಸೂಚಿಸಿದರು.

ಕಲ್ಯಾಣ ಮಂದಿರ, ಚಿತ್ರಮಂದಿರಗಳ ಮಾಲೀಕರು, ನಗರಸಭೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.