ADVERTISEMENT

ಅಜ್ಞಾನದಿಂದ ವಿಜ್ಞಾನದತ್ತ ಸಾಗಬೇಕು

ವಿಜಯಪುರದ ಇನ್ಸ್‌ಪೈರ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 12:58 IST
Last Updated 2 ಮಾರ್ಚ್ 2019, 12:58 IST
ವಿಜಯಪುರದ ಇನ್ಸ್‌ಫೈರ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗ ಮಾಡಿದರು
ವಿಜಯಪುರದ ಇನ್ಸ್‌ಫೈರ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗ ಮಾಡಿದರು   

ವಿಜಯಪುರ: ವಿದ್ಯಾರ್ಥಿಗಳು ಅಜ್ಞಾನದಿಂದ ವಿಜ್ಞಾನದೆಡೆಗೆ ಸಾಗಬೇಕು. ದೊರೆತ ಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸಂಶೋಧನೆಯಲ್ಲಿ ಹೆಚ್ಚೆಚ್ಚು ತೊಡಗಬೇಕು ಎಂದು ಇನ್ಸ್‌ಪೈರ್ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ ಮೂರ್ತಿ ಹೇಳಿದರು.

ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ದೀಪ ಹಚ್ಚಲು ಎಣ್ಣೆ, ಬತ್ತಿ, ಬೆಂಕಿ ಇವೆಲ್ಲವೂ ಬೇಕು ಎನ್ನುವುದು ಜ್ಞಾನವಾದರೆ ಆ ದೀಪ ಬೆಳಗಲು ಆಮ್ಲಜನಕ ಬೇಕಾಗುತ್ತದೆ ಎನ್ನುವುದೇ ವಿಜ್ಞಾನ. ಸರ್. ಸಿ.ವಿ. ರಾಮನ್‌ ಅವರು ಬೆಳಕಿನ ಚದುರುವಿಕೆ ಕುರಿತಂತೆ ಮಂಡಿಸಿದ ನೂತನ ಆವಿಷ್ಕಾರ ತನ್ನ ಭಾರತೀಯ ವಿಜ್ಞಾನದ ಕ್ಷೇತ್ರಕ್ಕೆ ಒಂದು ಹೊಸ ಆಯಾಮವನ್ನು ತಂದು ಕೊಟ್ಟಿದೆ’ ಎಂದರು.

ADVERTISEMENT

ರಾಮನ್‌ ಅವರು ಕಡಿಮೆ ಖರ್ಚಿನಲ್ಲಿ ಸರಳ ಸೂತ್ರದ ಮೂಲಕ ಈ ಸಂಶೋಧನೆಯನ್ನು ಮಂಡಿಸಿ ಭಾರತಕ್ಕೆ ನೊಬೆಲ್ ಪ್ರಶಸ್ತಿ ತಂದುಕೊಟ್ಟರು. ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕಾಗಿರುವ ಅನಿವಾರ್ಯತೆಯು ವಿದ್ಯಾರ್ಥಿಗಳಿಗೆ ಇದೆ ಎಂದರು.

ಪ್ರೊ. ಹೇಮಚಂದ್ರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಓದಿನಲ್ಲಿ ಹಿಂದೆ ಬೀಳುತ್ತಿದ್ದು ಆಳವಾದ ಸಂಶೋಧನೆಗಳು ಜರುಗುವಲ್ಲಿ ಇವರ ಪಾತ್ರ ಕಾಣುತ್ತಿಲ್ಲ. ಸಾಂಪ್ರದಾಯಿಕ ವಿಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದರು.

ಕಾಲೇಜಿನ ಮುಖ್ಯಸ್ಥೆ ಫರ್ಹನಾಜ್ ಮಾತನಾಡಿ, ವಿದ್ಯಾರ್ಥಿಗಳನ್ನು ಸಂಶೋಧನೆಯೆಡೆಗೆ ಪ್ರೋತ್ಸಾಹಿಸುವ ಜವಾಬ್ದಾರಿ ಪ್ರಾಧ್ಯಾಪಕರ ಮೇಲಿದೆ ಎಂದರು.

ಭೌತಶಾಸ್ತ್ರದ ಪ್ರಾಧ್ಯಾಪಕ ದೇವರಾಜುಲು ಎನ್. ಮಾತನಾಡಿ, ವಿಜ್ಞಾನದ ಸರಳ ಪ್ರಶ್ನೆಗಳನ್ನೂ ಕೂಡ ನಾವು ಜಟಿಲವಾಗಿಸಿಕೊಳ್ಳುತ್ತಿದ್ದೇವೆ. ನಿರಂತರ ಅಭ್ಯಾಸ ಪ್ರಯತ್ನದಿಂದ ಸುಲಭವಾಗಿ ಕಲಿಯಬಹುದು ಎಂದರು.

ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಸರ್. ಸಿ.ವಿ. ರಾಮನ್ ಅವರ ಕೊಡುಗೆ ಎಂಬ ವಿಷಯದ ಮೇಲೆ ಗಣಿತಶಾಸ್ತ್ರದ ಪ್ರಾಧ್ಯಾಪಕಿ ಆಯೆಷಾ ಕೌಸರ್ ಉಪನ್ಯಾಸ ನೀಡಿದರು.

ವಿಜ್ಞಾನ ವಿದ್ಯಾರ್ಥಿಗಳಿಗೆ ಗ್ರಹಿಸುವ ತಾಳ್ಮೆ, ನಿರಂತರ ಅಧ್ಯಯನ, ಅಭಿವ್ಯಕ್ತಿಸುವ ಬುದ್ಧಿಮತ್ತೆ ಅತೀ ಅಗತ್ಯವಾಗಿ ಬೇಕು ಎಂದರು. ವಿಜ್ಞಾನ ಕ್ಷೇತ್ರದಲ್ಲಿ ಸಂಭವಿಸಿರುವ ವೈಜ್ಞಾನಿಕ ಸಂಶೋಧನೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತಯಾರಿಸಿದ್ದ ಪ್ರಾತ್ಯಕ್ಷಿಕೆಗಳು ಎಲ್ಲರ ಗಮನ ಸೆಳೆದವು.

ವಿಜ್ಞಾನ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ.ವಿ, ವನಿತಾ, ನಿರ್ಮಿತಾ, ಅಂಬಿಕಾ, ಸುಧಾ, ವಿದ್ಯಾ, ಶುಭಾ, ಪವಿತ್ರ, ಸೌಮ್ಯಶ್ರೀ, ಕೀರ್ತನಾ, ಮೇಘನಾ, ನಂದಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.