ADVERTISEMENT

ಯೋಜನೆ ಪೂರ್ಣ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚನೆ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್‌ಸಿಎಸ್‌ಪಿ,ಟಿಎಸ್‌ಪಿ ಯೋಜನೆ 2019–20ನೇ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 13:28 IST
Last Updated 14 ಸೆಪ್ಟೆಂಬರ್ 2019, 13:28 IST
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ   

ದೇವನಹಳ್ಳಿ: ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಇಲಾಖೆಗಳಿಗೆ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಯೋಜನೆಗಳನ್ನು ಜಿಲ್ಲೆಯಲ್ಲಿ ಪೂರ್ಣವಾಗಿ ಅನುಷ್ಠಾನಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಬೀರಸಂದ್ರ ಗ್ರಾಮದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2019–20ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆಯಡಿ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೃಷಿ ಪದ್ಧತಿಯಲ್ಲಿ ನವಯಂತ್ರೋಪಕರಣ, ವೈಜ್ಞಾನಿಕ ಮೈಕ್ರೋನ್ಯೂಟ್ರಿಷನ್ ತಂತ್ರಾಂಶಗಳ ಅಳವಡಿಕೆ, ಋತುಮಾನಕ್ಕೆ ಅನುಗುಣವಾಗಿ ಬಿತ್ತನೆ ಬೀಜ, ತರಕಾರಿ ಬೆಳೆ ಕುರಿತು ಭಿತ್ತಿಪತ್ರಗಳು, ಕರಪತ್ರಗಳ ಮೂಲಕ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸಕಾಲದಲ್ಲಿ ಅರ್ಹ ಫಲಾನುಭವಿ ರೈತರಿಗೆ ಸೌಲಭ್ಯ ಒದಗಿಸುವ ಮೂಲಕ ಅನುದಾನ ಸದ್ಬಳಕೆಗೆ ಆದ್ಯತೆ ನೀಡಬೇಕು’ ಎಂದು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಜಿಲ್ಲಾ ಸ್ವಯಂ ಉದ್ಯೋಗ ಯೋಜನೆಯಡಿ ಮಹಿಳೆಯರಿಗೆ ಹೊಲಿಗೆ ಯಂತ್ರ ತರಬೇತಿ ನೀಡಿ ವಿತರಣೆ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯ ವಸತಿ ನಿಲಯಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಸೋಲಾರ್ ಆಳವಡಿಕೆ ಹಾಗೂ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ವಿಕಾಸಕ್ಕಾಗಿ ಕಂಪ್ಯೂಟರ್ ಲ್ಯಾಬ್ ಗಳಲ್ಲಿ ಕಡ್ಡಾಯವಾಗಿ ಅಂತರ್ಜಾಲ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ಒದಗಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹನುಮಂತರಾಯಪ್ಪ ಅವರಿಗೆ ಸೂಚಿಸಿದರು.

ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಅಡಿಯಲ್ಲಿ ವಿವಿಧ ಇಲಾಖೆಗಳಿಗೆ ನಿಗದಿಯಾಗಿರುವ ಅನುದಾನವನ್ನು ಯಾವ ಉದ್ದೇಶಗಳಿಗೆ ವೆಚ್ಚ ಮಾಡಲಾಗಿದೆ ಎಂಬುದನ್ನು ಇಲಾಖಾವಾರು ಮಾಹಿತಿ ಪಡೆದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹನುಮಂತರಾಯಪ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರಾಜ ಸುಲೋಚನ. ಎಮ್. ಎನ್., ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಆರ್.ಡಿ. ಸುಬ್ರಹ್ಮಣ್ಯ, ಪೌರಾಯುಕ್ತರು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳುಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.