ADVERTISEMENT

‘ಅನುದಾನ ಬಳಕೆಗೆ ಆಸಕ್ತಿ ವಹಿಸಿ’

ವಿವಿಧ ಗ್ರಾಮಗಳಲ್ಲಿ ಸಿಮೆಂಟ್‌ ಕಾಂಕ್ರೀಟ್‌ ರಸ್ತೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 12:39 IST
Last Updated 8 ಡಿಸೆಂಬರ್ 2018, 12:39 IST
ಗೋಪಸಂದ್ರ ಗ್ರಾಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಿ.ಸಿ. ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿದರು
ಗೋಪಸಂದ್ರ ಗ್ರಾಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಿ.ಸಿ. ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿದರು   

ವಿಜಯಪುರ: ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳುವಲ್ಲಿ ಜನರು ಆಸಕ್ತಿ ತೋರಿಸಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಬಾಲೇಪುರ, ಗೋಪಸಂದ್ರ, ಐಬಸಾಪುರ, ದೊಡ್ಡಕುರುಬರಹಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಳ್ಳಿಗಳಲ್ಲಿನ ಜನರಿಗೆ ರಸ್ತೆಗಳನ್ನು ನಿರ್ಮಾಣ ಮಾಡುವುದು, ಶುದ್ಧ ಕುಡಿಯುವ ನೀರು ಒದಗಿಸುವುದು, ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಡುವಂತಹ ಜವಾಬ್ದಾರಿ ನಮ್ಮದು. ಸರ್ಕಾರದಿಂದ ಬರುವಂತಹ ಎಲ್ಲ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಜನರು ಹೆಚ್ಚು ಆಸಕ್ತಿ ತೋರಿಸಬೇಕು’ ಎಂದರು.

ADVERTISEMENT

‘ಮುಖ್ಯಮಂತ್ರಿ ಅವರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದೇನೆ. ಮುಖ್ಯಮಂತ್ರಿಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸುವ ಕೆಲಸ ಮಾಡುತ್ತೇನೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ಸರ್ಕಾರ ಕೊಟ್ಟ ಅನುದಾನಗಳನ್ನು ಬಳಕೆ ಮಾಡಿಕೊಳ್ಳುವುದರ ಜೊತೆಗೆ ಕಾಮಗಾರಿಗಳ ಬಗ್ಗೆಯೂ ಜನರು ಗಮನ ಹರಿಸಬೇಕು ಎಂದರು.

‘ದನಕರುಗಳನ್ನು ಕಟ್ಟಿ ರಸ್ತೆಗಳನ್ನು ಹಾಳು ಮಾಡಬಾರದು. ಲಭ್ಯವಿರುವ ಕುಡಿಯುವ ನೀರನ್ನು ಮಿತವಾಗಿ ಬಳಸಿ ನೀರು ಉಳಿತಾಯ ಮಾಡಬೇಕು. ಸಮ್ಮಿಶ್ರ ಸರ್ಕಾರದಿಂದ ಹೆಚ್ಚು ಅನುದಾನ ಬಿಡುಗಡೆಯಾಗುತ್ತಿದೆ. ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯಕ್ಕೆ ಅವಕಾಶ ಮಾಡಿಕೊಡಬಾರದು’ ಎಂದರು.

‘ಹಳ್ಳಿಗಳು ಅಭಿವೃದ್ಧಿಯಾಗಬೇಕು. ಕುಡಿಯುವ ನೀರು ಸಿಗಬೇಕು. ರಸ್ತೆಗಳಾಗಬೇಕು. ಇವು ನಮ್ಮ ಮೂಲ ಗುರಿಯಾಗಬೇಕು’ ಎಂದರು.

‘ಬಮೂಲ್’ ಉಪಾಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಶ್ರೀರಾಮಯ್ಯ, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯ ದಿನ್ನೂರು ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.