ADVERTISEMENT

ದೇವನಹಳ್ಳಿಯಲ್ಲಿ ಜೆಡಿಎಸ್‌ ಶಕ್ತಿಪ್ರದರ್ಶನ

ಜನರೊಂದಿಗೆ ಜನತಾ ದಳ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 1:53 IST
Last Updated 25 ಆಗಸ್ಟ್ 2025, 1:53 IST
ದೇವನಹಳ್ಳಿಯಲ್ಲಿ ಜೆಡಿಎಸ್ ಆಯೋಜಿಸಿದ್ದ ‘ಜನರೊಂದಿಗೆ ಜನತಾದಳ’ ಕಾರ್ಯಕರ್ತರ ಸಮಾವೇಶಕ್ಕೆ ಬಂದ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು.
ದೇವನಹಳ್ಳಿಯಲ್ಲಿ ಜೆಡಿಎಸ್ ಆಯೋಜಿಸಿದ್ದ ‘ಜನರೊಂದಿಗೆ ಜನತಾದಳ’ ಕಾರ್ಯಕರ್ತರ ಸಮಾವೇಶಕ್ಕೆ ಬಂದ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು.   

ದೇವನಹಳ್ಳಿ: ಜೆಡಿಎಸ್ ಹಮ್ಮಿಕೊಂಡಿದ್ದ 'ಜನರೊಂದಿಗೆ ಜನತಾ ದಳ' ಕಾರ್ಯಕ್ರಮಕ್ಕೆ ಭಾನುವಾರ ಬಂದ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರನ್ನು ಜೆಡಿಎಸ್‌ ಕಾರ್ಯಕರ್ತರು ಕೆಂಪೇಗೌಡ ವೃತ್ತದಿಂದ ತೆರದ ವಾಹನದಲ್ಲಿ ಜೂನಿಯರ್ ಕಾಲೇಜು ಮೈದಾನದವರೆಗೆ ಮೆರವಣಿಗೆ ನಡೆಸಿದರು.

ಹೊಸ ಬಸ್‌ ನಿಲ್ದಾಣದಲ್ಲಿ ಕ್ರೇನ್‌ ಮೂಲಕ ವಿವಿಧ ಹಣ್ಣುಗಳ ಬೃಹತ್‌ ಹಾರ ಹಾಕಿ ಬರಮಾಡಿಕೊಂಡರು. ರಸ್ತೆಯ ಬದಿ ನಿಲ್ಲಿಸಿದ್ದ ಯಂತ್ರಗಳ ಮೂಲಕ ಹೂಮಳೆ ಗರೆದರು. ತಾಲ್ಲೂಕು ಜೆಡಿಎಸ್‌ ಯುವ ಘಟಕದ ಪದಾಧಿಕಾರಿಗಳು ಬೆಳ್ಳಿ ಖಡ್ಗ ನೀಡಿ ಸ್ವಾಗತಿಸಿದರು.

ಜಾತ್ಯತೀತ ಜನತಾದಳ ಸದಾ ಜನರೊಂದಿಗೆ, ರೈತರೊಂದಿಗೆ, ಕಾರ್ಯಕರ್ತರೊಂದಿಗೆ ಇದೆ. ಇಂತಹ ಪಕ್ಷಕ್ಕೆ ಮತ್ತಷ್ಟು ಬಲ ತುಂಬುವ ಕೆಲಸಕ್ಕೆ ಎಲ್ಲ ಕಾರ್ಯಕರ್ತರು ಕೈಜೋಡಿಸಬೇಕು ಎಂದು ನಿಖಿಲ್‌ ಕುಮಾರಸ್ವಾಮಿ ಮನವಿ ಮಾಡಿದರು.

ADVERTISEMENT

ಚುನಾವಣೆ ಗೆಲವು, ಸೋಲನ್ನು ಸಮಚಿತ್ತದಿಂದ ಸ್ವೀಕರಿಸಿ ಮುಂದೆ ಸಾಗೋಣ. ಜೆಡಿಎಸ್‌  ಕಾರ್ಯಕರ್ತರು ಯಾವುದೇ ಫಲಾಪೇಕ್ಷೆ ಇಲ್ಲದೇ ದುಡ್ಡಿಯುತ್ತಿದ್ದು ಮುಂದಿನ ಚುನಾವಣೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರದ ದಾಹಕ್ಕಾಗಿ ಯಾವ ಹಂತಕ್ಕೆ ಬೇಕಿದ್ದರೂ ಹೋಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉಂಡ ಮನೆಗೆ ದ್ರೋಹ ಬಗೆಯುವ ಗುಣ ಎಲ್ಲರಿಗೂ ಗೊತ್ತು. ರಾಜ್ಯ ಕ್ಯಾಬಿನೆಟ್‌ನಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿದೆ. ವಾಸ್ತವ ಮಾತನಾಡಿದ್ರೆ ಸಚಿವ ಸ್ಥಾನದಿಂದ ವಜಾ ಮಾಡುತ್ತಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದರು.

ಜೆಡಿಎಸ್‌ ಪಕ್ಷ ಅನೇಕ ರಾಜಕೀಯ ನಾಯಕರನ್ನು ಹುಟ್ಟು ಹಾಕಿದೆ. ದೇವೇಗೌಡರ ಅನೇಕ ನಾಯಕರನ್ನು ಬೆಳೆಸಿದ್ದಾರೆ ಎಂದು  ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ. ಮುನೇಗೌಡ, ತಾಲ್ಲೂಕು ಅಧ್ಯಕ್ಷ ಆರ್‌.ಮುನೇಗೌಡ ಮಾತನಾಡಿದರು.

ಶಿಡ್ಲಘಟ್ಟ ಶಾಸಕ ಬಿ.ಎನ್‌. ರವಿಕುಮಾರ್, ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ ಗೌಡ, ನೆಲಮಂಗಲದ ಮಾಜಿ ಶಾಸಕ ಶ್ರೀನಿವಾಸಮೂರ್ತಿ, ಪಕ್ಷದ ಮಹಿಳಾ ಘಟಕದ ರಾಜ್ಯಧ್ಯಕ್ಷೆ ರಶ್ಮಿ ರಾಮೇಗೌಡ, ಪುರಸಭೆ ಉಪಾಧ್ಯಕ್ಷ ಜಿ.ಎ.ರವೀಂದ್ರ, ಕುಂದಾಣ ಹೋಬಳಿ ಅಧ್ಯಕ್ಷ ಜಗದೀಶ್‌, ಗೌರಿಬಿದನೂರು ನರಸಿಂಹಮೂರ್ತಿ, ಹೊಸಕೋಟೆ ಅಧ್ಯಕ್ಷ ಶ್ರೀಧರ್, ಸಾದಹಳ್ಳಿ ಮಹೇಶ್‌, ಕಲ್ಯಾಣ್ ಕುಮಾರ್ ಬಾಬು, ದೊಡ್ಡಸಣ್ಣೆ ಮುನಿರಾಜು ಭಾಗವಹಿಸಿದ್ದರು.

ಸಮಾವೇಶದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.