ದೇವನಹಳ್ಳಿ: ಹಲವು ದಲಿತ ಮುಖಂಡರ ಹೋರಾಟ, ರಾಜಕೀಯ ವ್ಯಕ್ತಿಗಳ ಇಚ್ಛಾ ಶಕ್ತಿಯಿಂದ ಪಟ್ಟಣದ ಗಿರಿಯಮ್ಮ ಸರ್ಕಲ್ ಬಳಿ ನಿರ್ಮಾಣ ಆಗಿರುವ ಬಹುಕೋಟಿ ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಭವನದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.
ಜಿಲ್ಲೆ ಸೇರಿದಂತೆ ತಾಲ್ಲೂಕು ಮಟ್ಟದ ಹಲವಾರು ಕಾರ್ಯಕ್ರಮದ ಕೇಂದ್ರ ಬಿಂದುವಾಗಿರುವ ಈ ಭವನದ ವೇದಿಕೆ ಮೇಲೆ ಹಾಸಿರುವ ಮರದ ನೆಲಹಾಸನ್ನು ಗೆದ್ದಲು ಹುಳು ತಿಂದು, ಮಣ್ಣು ಮಾಡುತ್ತಿದೆ.
ವೇದಿಕೆ ಮೇಲ್ಭಾಗದಲ್ಲಿ ಸಿಮೆಂಟ್ ಕಾಂಕ್ರಿಟ್ ಭಾಗ ಹಾಗೆಯೇ ಉಳಿದಿದ್ದು, ವಿದ್ಯುತ್ ದೀಪ ವ್ಯವಸ್ಥೆ ಇಲ್ಲದೇ ಕತ್ತಲಲ್ಲಿ ಕಾರ್ಯಕ್ರಮ ಮಾಡಬೇಕಿರುವ ದುಸ್ಥಿತಿ ಆಯೋಜಕರದ್ದು.
ಇಡೀ ಜಿಲ್ಲೆಯಲ್ಲಿರುವ ಅಂಬೇಡ್ಕರ್ ಭವನದ ಪೈಕಿ ದೇವನಹಳ್ಳಿಯ ಭವನೇ ದೊಡ್ಡದು. ಆದರೆ ಭವನದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿದೆ. ಶೌಚಾಲಯಗಳ ಟೈಲ್ಸ್ ಕಿತ್ತು ಹೊರಬಂದಿದೆ. ಸ್ವಚ್ಛತೆ ಕಾಣದೆ ದುರ್ನಾತ ಬೀರುತ್ತಿದೆ. ನೆಲ ಮಹಡಿಯಲ್ಲಿರುವ ಊಟದ ಕೊಣೆಯಲ್ಲಿ ಒಳಚರಂಡಿ ವ್ಯವಸ್ಥೆ ಸರಿ ಇಲ್ಲದೇ ಪೈಪ್‌ಗಳು ಹೊರ ಬಂದಿದೆ.
ಭವನ ನಿರ್ಮಾಣವಾಗಿ ಆರೇಳು ವರ್ಷ ಕಳೆದಿದ್ದು, ನೆಲ ಮಹಡಿಗೆ ಸಾಗುವಾಗ ಇರುವ ಗೋಡೆಗಳು ಮಳೆ ನೀರು ಸೋರಿಕೆಯಾಗಿ ಶಿಥಿಲಾವಸ್ಥೆಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.