ADVERTISEMENT

ರಾಜ್ಯದಲ್ಲಿರುವ ಅನ್ಯಭಾಷಿಕರು ಕನ್ನಡ ಕಲಿಯಲಿ

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:15 IST
Last Updated 8 ಡಿಸೆಂಬರ್ 2019, 20:15 IST
ಶಾಸಕ ನಿಸರ್ಗ ನಾರಾಯಣಸ್ವಾಮಿ ಕನ್ನಡ ಧ್ವಜರೋಹಣ ನೆರವೇರಿಸಿದರು
ಶಾಸಕ ನಿಸರ್ಗ ನಾರಾಯಣಸ್ವಾಮಿ ಕನ್ನಡ ಧ್ವಜರೋಹಣ ನೆರವೇರಿಸಿದರು   

ದೇವನಹಳ್ಳಿ: ‘ರಾಜ್ಯದಲ್ಲಿರುವ ಪ್ರತಿಯೊಬ್ಬ ಅನ್ಯಭಾಷಿಕರು ಕನ್ನಡ ಕಲಿಯುವುದು ಕಡ್ಡಾಯವಾಗಬೇಕು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಕಾರಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ಯುವಕ ರೈತ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ನಂತರ ಅನ್ಯರಾಜ್ಯಗಳ ವಲಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಲವು ವರ್ಷಗಳಿಂದ ಸ್ಥಳೀಯವಾಗಿರುವ ವಲಸಿಗರು ವ್ಯಾಪಾರ ವಹಿವಾಟು, ವಿವಿಧ ವೃತ್ತಿಯಲ್ಲಿದ್ದು, ನಾಡಿನ ನೆಲ, ಜಲ, ಸಂಪನ್ಮೂಲಗಳನ್ನು ಪಡೆದು ಕನ್ನಡ ಭಾಷೆ ಕಲಿಯದೆ ಮರಾಠಿ, ತೆಲುಗು, ಉರ್ದು, ತಮಿಳು, ಮಲಯಾಳದಲ್ಲಿಮಾತನಾಡಿದರೆ ಕನ್ನಡ ಭವಿಷ್ಯದ ಪರಂಪರೆ ಉಳಿಯುವುದಾದರೂ ಹೇಗೆ. ಸ್ವಾಭಿಮಾನಿ ಕನ್ನಡಿಗರು ಅನ್ಯಭಾಷಿಗರಿಗೆ ಮನವರಿಕೆ ಮಾಡಿ, ಕನ್ನಡ ಕಲಿಯುವಂತೆ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಕನ್ನಡ ಭಾಷಾಭಿಮಾನ ಒಂದು ಸಂಘಟನೆಯಿಂದ ಬೆಳೆಸಿ, ಉಳಿಸಲು ಸಾಧ್ಯವಿಲ್ಲ. ಡಾ.ಸರೋಜಿನಿ ಮಹಿಷಿ ವರದಿ ಈವರೆಗೆ ಸಮರ್ಪಕ ಜಾರಿಯಾಗಿಲ್ಲ. ಕನ್ನಡಪರ ಹೋರಾಟಗಾರರು ಸಾಹಿತಿಗಳು ಕನ್ನಡ ಭಾಷಾ ಹಿತ ಚಿಂತಕರು ಸರ್ಕಾರದ ಮೆಲೆ ಒತ್ತಡ ತರಬೇಕು. ರಾಜ್ಯದ ಗಡಿಭಾಗದಲ್ಲಿರುವ ಸರ್ಕಾರಿ ಶಾಲೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಿ, ಅಗತ್ಯ ಮೂಲ ಸೌಲಭ್ಯಗಳ ಜೊತೆಗೆ ಶಿಕ್ಷಕರ ಕೊರತೆ ಇಲ್ಲದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

‘ಕಾರಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಕೇಂದ್ರದಲ್ಲಿ ಇಡಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಯುವಕರು, ಹಿರಿಯರು, ಮಹಿಳೆಯರು, ಮುಖಂಡರು ಪಕ್ಷಾತೀತವಾಗಿ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದಾರೆ. ಪ್ರತಿಯೊಂದು ಮನೆಗೂ ಕನ್ನಡದ ಹಬ್ಬ ಪಸರಿಸಬೇಕು’ ಎಂದು ಹೇಳಿದರು.

ಜೆಡಿಎಸ್‌ ತಾಲ್ಲೂಕು ಘಟಕ ಕಾರ್ಯಾಧ್ಯಕ್ಷ ಆರ್‌. ಮುನೇಗೌಡ ಮಾತನಾಡಿ, ‘ಕನ್ನಡ ಭಾಷೆಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಅದು ಈವರೆಗೂ ಅಸ್ತಿತ್ವದಲ್ಲಿದೆ ಎಂದರೆ ಭಾಷೆಯ ಗಟ್ಟಿತನ ಮತ್ತು ತಲೆತಲಾಂತರದಿಂದ ಕಾವಲು ಕಾಯ್ದುಕೊಂಡು ಬರುತ್ತಿರುವ ಸಾಹಿತಿಗಳು ಮತ್ತು ಕನ್ನಡ ಅಭಿಮಾನಿಗಳ ಶ್ರಮದ ಫಲ. ಅದನ್ನು ಉಳಿಸಿಕೊಂಡು ಮುನ್ನಡೆಯುವ ಜವಾಬ್ದಾರಿ ಎಲ್ಲರ ಮೆಲಿದೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್‌ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ದೇವರಾಜ್‌ ಮಾತನಾಡಿ, ‘ಜ್ಞಾನಾರ್ಜನೆಗೆ ಪ್ರತಿಯೊಂದು ಭಾಷೆ ಅವಶ್ಯವಾದರೂ ಮಾತೃಭಾಷೆ ಕನ್ನಡ ನಮ್ಮ ನರನಾಡಿಯಲ್ಲಿ ಸಮ್ಮಿಲಗೊಳಿಸಿಕೊಳ್ಳಬೇಕು. ಜೀವನ ಮೌಲ್ಯ ನಮ್ಮ ಭಾಷೆ ಮತ್ತು ಸಂಸ್ಕೃತಿಯಲ್ಲಿ ಅಡಗಿವೆ. ಭಾಷಾಜ್ಞಾನ ನಿಂತ ನೀರಲ್ಲ. ಆಳವಾದ ಅಧ್ಯಯನ ಮಾಡಬೇಕು. ಹಿರಿಯ ಸಾಹಿತಿಗಳ ಲೇಖನ, ಕೃತಿಗಳು, ಕಾದಂಬರಿಯನ್ನು ಓದಬೇಕು’ ಎಂದು ಹೇಳಿದರು.

ಎ.ಪಿ.ಎಂ.ಸಿ ಅಧ್ಯಕ್ಷ ಕೆ.ವಿ.ಮಂಜುನಾಥ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್‌, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆನಂದಮ್ಮ, ಸದಸ್ಯರಾದ ರಾಜೇಂದ್ರ, ಪ್ರಭಾವತಿ, ರೂಪ, ಇಂದ್ರಮ್ಮ, ನಾಗರತ್ನಮ್ಮ, ಶಿವಶಂಕರ್‌, ವಿಎಸ್‌ಎಸ್‌ಎನ್‌ ಅಧ್ಯಕ್ಷ ಆರ್‌ ಮಂಜುನಾಥ್‌, ಎಂ.ಪಿ.ಸಿ.ಎಸ್‌ ಅಧ್ಯಕ್ಷ ಭೈರೇಗೌಡ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಮುನೇಗೌಡ, ಮುಖಂಡರಾದ ಕೆ.ಎನ್‌.ಮುನಿರಾಜು, ತಾಜ್‌ ಪೀರ್‌, ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.