ADVERTISEMENT

ರಾಜಕೀಯ, ಉದ್ಯೋಗಕ್ಕೆ ಮೀಸಲಾತಿ ಕೊಡಿ: ಟಿ.ವೇಣುಗೋಪಾಲ್

ಬಲಿಜ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 14:01 IST
Last Updated 14 ಅಕ್ಟೋಬರ್ 2018, 14:01 IST
ಬಲಿಜ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು
ಬಲಿಜ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು   

ದೊಡ್ಡಬಳ್ಳಾಪುರ: ಬಲಿಜ ಜನಾಂಗಕ್ಕೆ ಪ್ರವರ್ಗ ’2ಎ’ ಅಡಿಯಲ್ಲಿ ಈಗ ಶೈಕ್ಷಣಿಕ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಮಾತ್ರ ನೀಡಲಾಗಿದೆ. ರಾಜಕೀಯ, ಉದ್ಯೋಗ ಪಡೆಯಲು ಈ ಸೌಲಭ್ಯ ದೊರೆಯಬೇಕು ಎಂದು ಬೆಂಗಳೂರಿನ ನ್ಯೂ ಬಾಲ್ಡ್ ವಿನ್ ವಿದ್ಯಾ ಸಂಸ್ಥೆ ಸಂಸ್ಥಾಪಕ ಡಾ. ಟಿ. ವೇಣುಗೋಪಾಲ್ ಹೇಳಿದರು.

ನಗರದಲ್ಲಿ ಭಾನುವಾರ ಯೋಗಿ ನಾರೇಯಣ ಯತೀಂದ್ರರ ಬಲಿಜ ಸಂಘ ಮತ್ತು ಯುವ ಬಲಿಜ ಸಂಘದ ವತಿಯಿಂದ ನಡೆದ ‘ಪ್ರತಿಭಾ ಪುರಸ್ಕಾರ’ದಲ್ಲಿ ಮಾತನಾಡಿದರು.

ರಾಜಕೀಯವಾಗಿ ಬಲಿಜ ಸಮುದಾಯದವರು ಪ್ರಬಲವಾಗಿ ಬೆಳೆಯದೆ ಇರುವುದರಿಂದ ಉದ್ಯೋಗಕ್ಕಾಗಿ ’2ಎ’ ಸೌಲಭ್ಯ ಪಡೆಯಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. 1993ರಲ್ಲಿ ಯಾವುದೇ ಕಾರಣ ನೀಡದೇ ಈ ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಿತ್ತು. ಆದರೆ ಸತತ ಹೋರಾಟದ ಫಲವಾಗಿ 2011ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶೈಕ್ಷಣಿಕ ಮೀಸಲಾತಿ ಮಾತ್ರ ನೀಡಲಾಗಿದೆ ಎಂದರು.

ADVERTISEMENT

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ರಾಜಕೀಯ ಹಾಗೂ ಉದ್ಯೋಗ ಮೀಸಲಾತಿಗೆ ಅವಕಾಶ ಕಲ್ಪಿಸಿಕೊಟ್ಟಿಲ್ಲ. ಹೋರಾಟಕ್ಕೆ ಸಮುದಾಯದ ಎಲ್ಲರೂ ಒಗ್ಗಟ್ಟಾಗಬೇಕು ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ತಾಲ್ಲೂಕಿನ ತಿಪ್ಪಾಪುರ ಸಮೀಪ ಬಲಿಜ ಜನಾಂಗದ ಕಾರ್ಯಚಟುವಟಿಕೆಗೆ 1 ಎಕರೆ ಭೂಮಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯಾವುದೆ ಸಮುದಾಯದ ಸಮಗ್ರ ಪ್ರಗತಿಗೆ ಶಿಕ್ಷಣ ಮುಖ್ಯ. ಇದಕ್ಕಾಗಿ ಪೋಷಕರು ತಮ್ಮ ಎಲ್ಲ ಕಷ್ಟಗಳ ನಡುವೆಯೂ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವ ಕಡೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ. ರಾಮಮೂರ್ತಿ ವಹಿಸಿದ್ದರು. ಸಂಸತ್ ಸದಸ್ಯ ಪಿ.ಸಿ. ಮೋಹನ್, ಸಂಖ್ಯಾಶಾಸ್ತ್ರ ಪ್ರವೀಣ ಮಹರ್ಷಿ ಜಯಶ್ರೀನಿವಾಸನ್ ಗುರೂಜಿ, ಯುವ ಬಲಿಜ ಸಂಘದ ಅಧ್ಯಕ್ಷ ಎನ್.ಶ್ರೀನಾಥ್, ನಗರಸಭೆ ಅಧ್ಯಕ್ಷ ಟಿ.ಎನ್. ಪ್ರಭುದೇವ್, ಪ್ರಾಂಶುಪಾಲ ಪ್ರೊ.ಎಸ್.ಪಿ. ರಾಜಣ್ಣ, ನಗರಸಭೆ ಸದಸ್ಯರಾದ ಎಸ್.ಸುಶೀಲರಾಘವ, ಜಿ. ಪ್ರಕಾಶ್, ಸಂಘದ ಗೌರವ ಅಧ್ಯಕ್ಷ ಚಿಕ್ಕವೆಂಕಟರಮಣಪ್ಪ, ಉಪಾಧ್ಯಕ್ಷ ಎಸ್.ಎಸ್.ಟಿ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಡಿ.ಎಂ. ಬಾಲಕೃಷ್ಣ, ಸಹ ಕಾರ್ಯದರ್ಶಿ ಟಿ. ರಂಗನಾಥ್, ಖಜಾಂಚಿ ಟಿ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ಯುವ ಬಲಿಜ ಸಂಘದ ಗೌರವ ಅಧ್ಯಕ್ಷ ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸಹ ಕಾರ್ಯದರ್ಶಿ ಜವಾಜಿ ರಾಜೇಶ್, ಖಜಾಂಚಿ ಶಿವಕುಮಾರ್, ಜೆ.ಎಸ್. ಸುಬ್ರಮಣ್ಯಪ್ಪ, ಸಂಘದ ಹಿರಿಯ ಮುಖಂಡರಾದ ಡಾ.ಕೆ.ವೈ. ರಾಮಚಂದ್ರಪ್ಪ, ಎಸ್.ಆರ್. ಮುನಿರಾಜು, ಎನ್. ವೆಂಕಟೇಶ್, ಸಿ. ಮುನಿರಾಜು, ಜವಾಜಿ ಸೀತಾರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.