ADVERTISEMENT

ಜೆಡಿಎಸ್‌ ವರಿಷ್ಠರ ಸೂಚನೆ ದಿಕ್ಕರಿಸುವುದು ಸರಿಯಲ್ಲ: ರಮೇಶ್‌ ಗೌಡ

ನಗರಸಭೆ ಸ್ಥಾಯಿ ಸಮಿತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:43 IST
Last Updated 5 ಜುಲೈ 2022, 4:43 IST
ದೊಡ್ಡಬಳ್ಳಾಪುರದಲ್ಲಿ ಸೋಮವಾರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಆದಿಲಕ್ಷ್ಮಿ ಅವರನ್ನು ಪಕ್ಷದ ಮುಖಂಡರು ಅಭಿನಂದಿಸಿದರು
ದೊಡ್ಡಬಳ್ಳಾಪುರದಲ್ಲಿ ಸೋಮವಾರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಆದಿಲಕ್ಷ್ಮಿ ಅವರನ್ನು ಪಕ್ಷದ ಮುಖಂಡರು ಅಭಿನಂದಿಸಿದರು   

ದೊಡ್ಡಬಳ್ಳಾಪುರ: ‘ನಗರಸಭೆ ಸ್ಥಾಯಿ ಸಮಿತಿಗೆ ಆಯ್ಕೆಯು ಹೈಕಮಾಂಡ್‌ ಸೂಚನೆಯಂತೆ ನಡೆದಿದೆ. ಅಸಮಾಧಾನಗೊಂಡವರಿಗೆ ಮುಂದಿನ ದಿನಗಳಲ್ಲಿ ಅವಕಾಶ ದೊರೆಯಲಿದೆ. ಯಾವುದೇ ಮನಸ್ತಾಪ ಇದ್ದಲ್ಲಿ ಅದನ್ನು ಪಕ್ಷದ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಬೇಕೆ ವಿನಾ ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್‌ಗೌಡ ಹೇಳಿದರು.

ನಗರಸಭೆಯಲ್ಲಿ ಸೋಮವಾರ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮಿ ಅವರ ಕಚೇರಿ ಪೂಜೆ ಮತ್ತು ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ಥಾಯಿ ಸಮಿತಿಗೆ ಪೌರ ಕಾರ್ಮಿಕರ ಕುಟುಂಬದ ಮಹಿಳೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಜೆಡಿಎಸ್‍ ಹೊಂದಿರುವ ಜಾತ್ಯತೀತ ನಿಲುವಿಗೆ ನಿದರ್ಶನ. ಈ ಬೆಳವಣಿಗೆ ಬರೀ ತೋರ್ಪಡಿಕೆಗಾಗಿ ಅಲ್ಲ. ಪಕ್ಷದ ವರಿಷ್ಠರು ಈಗಾಗಲೇ ನಿರ್ಧರಿಸಿದ್ದಂತೆ ನಗರಸಭೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಜೆಡಿಎಸ್ ಪಕ್ಷಕ್ಕೆ ಬಂದಿದೆ ಎಂದರು.

ADVERTISEMENT

ಪಕ್ಷದ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಿಲ್ಲ. ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ. ಮುನೇಗೌಡ ವರಿಷ್ಠರನ್ನು ಕಡೆಗಣಿಸುತ್ತಿದ್ದಾರೆ. ಆದರೆ, ನಾವು ಮಾತ್ರ ಅವರನ್ನು ಎಲ್ಲಾ ಸಂದರ್ಭಗಳಲ್ಲೂ ಆಹ್ವಾನ ಮಾಡುತ್ತಿದ್ದೇವೆ. ಇದಕ್ಕೆ ಸ್ಪಂದಿಸದೆ ಗೈರಾಗಿದ್ದಾರೆ. ಪಕ್ಷ ಸಂಘನೆಯಲ್ಲಿ ನಡೆಯುತ್ತಿರುವ ವಿದ್ಯಮಾನ ಕುರಿತು ಕುಮಾರಸ್ವಾಮಿ ಅವರು ಪ್ರತಿದಿನ ಮಾಹಿತಿ ಪಡೆಯುತ್ತಿದ್ದು, ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲವನ್ನು ಶೀಘ್ರದಲ್ಲಿಯೇ ಬಗೆಹರಿಸಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್‌ನಿಂದ ಜನತಾ ಮಿತ್ರ ಕಾರ್ಯಕ್ರಮ ಆಯೋಜಿಸಲಾಗಿದೆ. ಬಸವನಗುಡಿಯಲ್ಲಿ ನಡೆಯುವ ಸಮಾವೇಶದ ನಂತರ ಇಲ್ಲಿನ ಗೊಂದಲಗಳಿಗೆ ತೆರೆಬೀಳಲಿದೆ ಎಂದರು.

ಜೆಡಿಎಸ್‌ ಮುಖಂಡ ಹರೀಶ್‌ಗೌಡ ಮಾತನಾಡಿ, ಮಧುಗಿರಿ ಕ್ಷೇತ್ರದಲ್ಲಿ ಕೆ.ಎನ್‌. ರಾಜಣ್ಣ ಪರವಾಗಿ ಚುನಾವಣೆ ವೇಳೆ ದೇವೇಗೌಡರು ಅನಾರೋಗ್ಯದ ನಡುವೆಯೂ ಪ್ರಚಾರ ಮಾಡಿ ಶಾಸಕ ರಾಗಿ ಆಯ್ಕೆಯಾಗುವಂತೆ ಮಾಡಿದ್ದರು. ಆದರೆ, ಅವರು ಈಗ ದೇವೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿದರು.

ಕಾಂಗ್ರೆಸ್ ಶಾಸಕ ಟಿ. ವೆಂಕಟರಮಣಯ್ಯ ಅವರ ನಿಲುವಿಂದ ಬೇಸತ್ತು ನಗರಸಭೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪಕ್ಷದ ಹಿರಿಯ ಮುಖಂಡರು ಸೂಚಿಸಿದರು. ಜೆಡಿಎಸ್ ವರಿಷ್ಠರು ನೀಡಿದ ಸೂಚನೆಯಂತೆ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷೆಯನ್ನು ಆಯ್ಕೆ ಮಾಡಲಾಗಿದೆ ಎಂದರು.

ವರಿಷ್ಠರ ಸೂಚನೆಯಂತೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಲಾಗುತ್ತಿದೆ. ಇದನ್ನು ಸಹಿಸಲಾಗದೆ ನಮ್ಮದೇ ಪಕ್ಷದವರು ಬಾಯಿಗೆ ಬಂದಂತೆ ಮಾತಾಡುವುದು ಸರಿಯಲ್ಲ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ವರಿಷ್ಠರ ಸೂಚನೆಯ ವಿರುದ್ಧವಾಗಿ ಮಾತನಾಡಿ ಪಕ್ಷಕ್ಕೆ ಹಾನಿ ಮಾಡಲು ಮುಂದಾಗುವ ಬದಲು ಪಕ್ಷ ಬಿಟ್ಟು ತೆರಳಬಹುದು ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮಿ ಮಾತನಾಡಿ, ತಮ್ಮ ಪಕ್ಷದವರು ಅಧ್ಯಕ್ಷರಾದಾಗ ಮುಖಂಡರು ಬಂದು ಶುಭ ಕೋರಬೇಕಿತ್ತು. ಆ ನಂತರ ಯಾವುದೇ ಭಿನ್ನಾಭಿಪ್ರಾಯ ಇದ್ದರೆ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಮುಖಂಡರ ಈ ವರ್ತನೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಫರ್ಹಾನಾ ತಾಜ್‌, ಸದಸ್ಯರಾದ ಟಿ.ಎನ್. ಪ್ರಭುದೇವ್‌, ಮಲ್ಲೇಶ್‌, ರಾಜ್ಯ ತೆಂಗು ನಾರು ಸಹಕಾರ ಮಂಡಳಿ ಅಧ್ಯಕ್ಷ ವೆಂಕಟೇಶ್‌ ಬಾಬು, ಮುಖಂಡರಾದ ಎಚ್. ಅಪ್ಪಯ್ಯ, ಅಶ್ವಥ್ ನಾರಾಯಣ, ಆನಂದ್‌, ಕುಂಟನಹಳ್ಳಿ ಮಂಜುನಾಥ್‌, ರಾ. ಬೈರೇಗೌಡ, ಚಂದ್ರಶೇಖರ್, ತಳವಾರ ನಾಗರಾಜ್, ನಾರಾಯಣಪ್ಪ, ಹರ್ಷ, ರಿಯಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.