ADVERTISEMENT

ಅಭಿವೃದ್ಧಿ ಮಾಡದ ಶಾಸಕ ನಿಸರ್ಗ ನಾರಾಯಣಸ್ವಾಮಿ

ಶಾಸಕ ನಿಸರ್ಗ ವಿರುದ್ಧ ‌ಎಂಎಲ್‌ಸಿ ಎಸ್‌. ರವಿ ಆರೋಪ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 5:24 IST
Last Updated 14 ಮಾರ್ಚ್ 2023, 5:24 IST
ದೇವನಹಳ್ಳಿಯ ಕೊಯಿರದಲ್ಲಿ ಬ್ಲಾಕ್ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಗ್ಯಾರಂಟಿ ಕಾರ್ಡ್‌ ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿದರು
ದೇವನಹಳ್ಳಿಯ ಕೊಯಿರದಲ್ಲಿ ಬ್ಲಾಕ್ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಗ್ಯಾರಂಟಿ ಕಾರ್ಡ್‌ ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿದರು   

ದೇವನಹಳ್ಳಿ: ನಿಸರ್ಗ ನಾರಾಯಣಸ್ವಾಮಿ ಅವರು ಅಸಮರ್ಥ ಶಾಸಕರಾಗಿದ್ದು, ಕ್ಷೇತ್ರದ ಜನರ ಸೇವೆಗೆ ಶಾಶ್ವತವಾಗಿ ಉಳಿಯುವ ಯಾವ ಕೆಲಸ ಹಾಗೂ ಕಾಮಗಾರಿಯನ್ನು ನಡೆಸಿಲ್ಲ. ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಅವರು ಒಂದೇ ಒಂದು ನಿವೇಶನವನ್ನು ಬಡವರಿಗೆ ಹಂಚಿಕೆ ಮಾಡಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಆರೋಪಿಸಿದರು.

ತಾಲ್ಲೂಕಿನ ಕುಂದಾಣ ಹೋಬಳಿಯ ಕೊಯಿರದಲ್ಲಿ ಸೋಮವಾರ ಬ್ಲಾಕ್‌ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಗ್ಯಾರಂಟಿ ಕಾರ್ಡ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಡವರಿಗೆ ನಿವೇಶನ ನೀಡದ ಅವರು, ತಮ್ಮ ಸ್ವಂತ ಬಡಾವಣೆಯಲ್ಲಿ ₹50 ಲಕ್ಷ ನೀಡಿ ನಿವೇಶನ ಖರೀದಿಸಿ ಎನ್ನುವ ಮನಸ್ಥಿತಿ ಹೊಂದಿದ್ದಾರೆ’ ಎಂದು ದೂರಿದರು.

‘ಜೆಡಿಎಸ್‌ ಮತ್ತು ಬಿಜೆಪಿ ಜಾತಿ ಆಧಾರಿತವಾಗಿ ಪಕ್ಷ ಸಂಘಟಿಸುತ್ತಿದೆ. ಕಾಂಗ್ರೆಸ್‌ಗೆ ಜಾತಿ ಇಲ್. ಕೋಮು ಸೌರ್ಹದತೆಯೇ ನಮ್ಮ ಮೂಲ ಮಂತ್ರ ಎಂದು ಹೇಳಿದರು.

ADVERTISEMENT

‘ದೇಶದ ಐಕ್ಯತೆ, ಸಮಗ್ರತೆಗಾಗಿ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಅವರು ಪ್ರಾಣ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್‌ 75 ವರ್ಷಗಳಿಂದ ಕಟ್ಟಿ ಬೆಳೆಸಿದ್ದ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ. ಈ ಮೂಲಕ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ’ ಎಂದು ಕಿಡಿಕಾರಿದರು.

ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಭಾವದಿಂದ ಭ್ರಷ್ಟಾಚಾರ ಆರೋಪಿಗೆ ಒಂದೇ ದಿನದಲ್ಲೇ ಜಾಮೀನು ದೊರೆತಿರುವುದು ದುರಂತ ಎಂದು ಬೇಸರಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ನೀಡಲಾಗುತ್ತದೆ. ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಮಾಡಿ ಗ್ಯಾರಂಟಿ ಕಾರ್ಡ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಮುನಿನರಸಿಂಹಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌, ಶೆಟ್ಟಿಗೆರೆ ರಾಜಣ್ಣ, ಸಿ.ಜಗನ್ನಾಥ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಕುಮಾರ್‌, ಲಕ್ಷ್ಮೀ ನಾರಾಯಣ, ತೂಬಗೆರೆ ಮುನಿರಾಜು, ಅನಂತ ಕುಮಾರಿ, ಚಿನ್ನಪ್ಪ, ಲಕ್ಷ್ಮಣ್ಣ ಗೌಡ, ಶೆಟ್ಟಿಗೆರೆ ರಾಜಣ್ಣ, ಮುದುಗುರ್ಕಿ ನಾರಾಯಣಸ್ವಾಮಿ, ಕನ್ನಮಂಗಳ ಗ್ರಾ.ಪಂ. ಅಧ್ಯಕ್ಷ ಲಕ್ಷ್ಮೀಕಾಂತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.