ADVERTISEMENT

ರಾಜಕೀಯ ದಾಳದಲ್ಲಿ ಯೋಜನೆ

ಭೈರಗೊಂಡ್ಲು ಬಳಿ ಎತ್ತಿನಹೊಳೆ ಕಾಮಗಾರಿ ಆರಂಭ l ಮುಂಬರುವ ಚುನಾವಣೆಯಲ್ಲಿ ಪ್ರಮುಖ ವಿಷಯ

ವಡ್ಡನಹಳ್ಳಿ ಬೊಜ್ಯನಾಯ್ಕ
Published 11 ನವೆಂಬರ್ 2020, 5:28 IST
Last Updated 11 ನವೆಂಬರ್ 2020, 5:28 IST
ಭೈರಗೊಂಡ್ಲು ಬಳಿ ನಡೆಯುತ್ತಿರುವ ಜಲಾಶಯ ಕಾಮಗಾರಿ
ಭೈರಗೊಂಡ್ಲು ಬಳಿ ನಡೆಯುತ್ತಿರುವ ಜಲಾಶಯ ಕಾಮಗಾರಿ   

ದೇವನಹಳ್ಳಿ: ಬಯಲುಸೀಮೆ ಐದು ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸುವ ಎತ್ತಿನಹೊಳೆ ಯೋಜನೆ ಕಾಮಗಾರಿ ಕುಂಟುತ್ತಲೇ ಸಾಗಿದೆ. ಕೊರಟಗೆರೆ ತಾಲ್ಲೂಕು ಭೈರಗೊಂಡ್ಲು ಬಳಿ ನೀರು ಸಂಗ್ರಹ ಜಲಾಶಯದ ಕಾಮಗಾರಿ ಈಗಷ್ಟೇ ಆರಂಭವಾಗಿದೆ.

ಬಯಲುಸೀಮೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ವಿಶ್ವೇಶ್ವರಯ್ಯ ಜಲ ನಿಗಮದಡಿಯಲ್ಲಿ ರಾಜ್ಯ ಸರ್ಕಾರ ₹13ಸಾವಿರ ಕೋಟಿ ವೆಚ್ಚದಲ್ಲಿ 2014ನೇ ಸಾಲಿನಲ್ಲಿ ಕಾಮಗಾರಿಗೆ ಚಾಲನೆ ನೀಡಿದೆ.

ಭೂಸ್ವಾಧೀನ ವಿಳಂಬ, ಅರಣ್ಯಭೂಮಿ ವಶಕ್ಕೆ ಇದ್ದ ತಾಂತ್ರಿಕ ಅಡಚಣೆ ಜತೆಗೆ ಪರಿಸರವಾದಿಗಳ ವಿರೋಧದಿಂದಾಗಿ ಕಾಮಗಾರಿ ಬಹಳಷ್ಟು ವಿಳಂಬವಾದರೂ ಕೆಲ
ವೊಂದು ಸಮಸ್ಯೆಗಳಿಗೆ ಪರಿಹಾರ ಕಂಡು 2017-18ನೇ ಸಾಲಿನಿಂದ ಮೂಲ ಎತ್ತಿನಹೊಳೆಯಲ್ಲಿ ಕಾಮಗಾರಿ ವೇಗ ಹೆಚ್ಚಿಸಿಕೊಂಡಿತ್ತು.

ADVERTISEMENT

2018ರಲ್ಲಿ ಆಡಳಿತಕ್ಕೆ ಬಂದ ಸಮ್ಮಿಶ್ರ ಸರ್ಕಾರದ ಒಂದು ವರ್ಷದ ನಂತರ ಬದಲಾದ ರಾಜಕೀಯ ಲೆಕ್ಕಚಾರದಲ್ಲಿ ಎತ್ತಿನಹೊಳೆ ಕತೆ ಅಷ್ಟೇ ಎಂಬಂತಹ ಸ್ಥಿತಿಗೆ ಬಂದಿತ್ತು. ಈಗ ಗ್ರಾಮ ಪಂಚಾಯಿತಿ ಚುನಾವಣೆ ದೃಷ್ಟಿಯಿಂದ ಕಾಮಗಾರಿ ಮತ್ತೆ ಆರಂಭವಾಗಿದೆ. ನಾಲ್ಕಾರು ಜೆಸಿಬಿ ಹಾಗೂ ಟಿಪ್ಪರ್ ವಾಹನಗಳಿಂದ ಕಾಮ
ಗಾರಿಗೆ ಮುಂದಾಗಿರುವ ಕ್ರಮದ ಔಚಿತ್ಯವನ್ನು ರೈತರು ಪ್ರಶ್ನಿಸಿದ್ದಾರೆ.

ಎತ್ತಿನಹೊಳೆ ಸಮಗ್ರ ಯೋಜನಾ ವರದಿ ಅನ್ವಯ ಭೈರಗೊಂಡ್ಲು ಬಳಿ 5.78 ಟಿ.ಎಂ.ಸಿ ಸಂಗ್ರಹ ಸಾಮರ್ಥ್ಯದ ನೀರಿನ ಜಲಾಶಯ ನಿರ್ಮಾಣ ಮಾಡಿ ಅಲ್ಲಿಂದ 45ಕಿ.ಮೀ ಉದ್ದದ ರೈಸಿಂಗ್ ಮೇನ್ ಮೂಲಕ ನೀರು ಎತ್ತಿ (128 ಮೀ ಎತ್ತುವಿಕೆ ) ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದ ಬಳಿ ಇರುವ ಪಾಲಾರ್ ಕೊಳ್ಳಕ್ಕೆ ಹರಿಸಿ ಗುರುತ್ವ ಕಾಲುವೆ ಮೂಲಕ ಹೆಸರಘಟ್ಟ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ,ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರುಪೂರೈಕೆ ಮಾಡು
ವುದು ಯೋಜನೆ ಉದ್ದೇಶವಾಗಿದೆ.

ಎರಡೂವರೆ ವರ್ಷ ಕಾಲ ಸುಮ್ಮನಿದ್ಧ ಸರ್ಕಾರ ಏಕಾಏಕಿ ಐದಾರು ಜೆಸಿಬಿ ಯಂತ್ರಗಳಿಂದ ಕಾಮಗಾರಿಗೆ ಮತ್ತೆ ಚಾಲನೆ ನೀಡಿರುವುದು ಕಣ್ಣೋರೆಸುವ ತಂತ್ರ ಎಂದು ಸಾರ್ವಜನಿಕರ ಆರೋ‍ಪವಾಗಿದೆ.

ಮೊದಲೇ ಹಂತದಲ್ಲಿ ಏತ ನೀರಾವರಿಗೆ 221.41 ಮೇ.ವ್ಯಾ ಹಾಗೂ ಎರಡನೇ ಹಂತದ ಏತ ನೀರಾವರಿಗೆ 53.45 ಮೇ.ವ್ಯಾ ವಿದ್ಯುತ್ ಬೇಕು. 220 ಕಿ.ಮಿ ಸಾಮರ್ಥ್ಯದ ಕನಿಷ್ಠ ನಾಲ್ಕು ವಿದ್ಯುತ್ ಪರಿವರ್ತಕ ತುರ್ತು ಸಂದರ್ಭದಲ್ಲಿ ಕಾಯ್ದಿರಿಸಬೇಕು. ಯೋಜನಾ ವರದಿಯಲ್ಲಿ ಯೋಜನೆ ಮುಕ್ತಾಯಕ್ಕೆ ಯಾವುದೇ ಕಾಲಮಿತಿ ನಿಗದಿಯಾಗದಿರುವುದು ಈ ಯೋಜನೆ ವಿಶೇಷ. 2014ರಲ್ಲಿ ಸರ್ಕಾರ ಕ್ರಿಯೊ ಯೋಜನೆ ಸಿದ್ಧಪಡಿಸಿ ಟೆಂಡರ್ ಮೂಲಕ ₹13 ಸಾವರ ಕೋಟಿ ಅಂದಾಜು ವೆಚ್ಚ ಎಂದು ಹೇಳಿದೆ. ಟೆಂಡರ್ ಪ್ರಕ್ರಿಯೆ ಮುಗಿದು ಆರೇಳು ವರ್ಷ ಕಳೆದರೂ ಈ ಹಿಂದಿನ ಟೆಂಡರ್‌ಗೆ ಕಾಮಗಾರಿ ಮುಗಿಸುವುದು ಅಸಾಧ್ಯ.

ಮತ್ತೊಮ್ಮೆ ಹೆಚ್ವುವರಿ ಅನುದಾನಕ್ಕೆ ಟೆಂಡರ್ ಆಗುವ ಸಾಧ್ಯತೆ ಇದೆ. ಈಗಿನ ಪರಿಸ್ಥಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ₹25 ಸಾವಿರದಿಂದ 30 ಸಾವಿರ ಕೋಟಿ ವ್ಯತ್ಯಯವಾಗಲಿದೆ ಎನ್ನುತ್ತಾರೆ ನಿವೃತ್ತ ನೀರಾವರಿ ಮುಖ್ಯ ಎಂಜಿನಿಯರ್
ಭೀಮಾನಾಯ್ಕ.

ಯೋಜನಾ ಸಮಗ್ರ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ಯೋಜನೆಗೆ ಬೇಕಾಗಿರುವ ಭೂಮಿ ಮೊದಲ ಹಂತದಲ್ಲಿ ಖಾಸಗಿ 276.08 ಹೆಕ್ಟೇರ್, ಎರಡನೇ ಹಂತದಲ್ಲಿ ಖಾಸಗಿ ಭೂಮಿ 4900 ಹೆಕ್ಟೇರ್ ಬೇಕಾಗಿದೆ.

ರೈತರ ಪ್ರತಿ ಎಕರೆ ಭೂಮಿಗೆ ಕನಿಷ್ಠ ₹50 ರಿಂದ 70 ಲಕ್ಷ ಪರಿಹಾರ ನೀಡಬೇಕು. ಸ್ಥಳಾಂತರಗೊಳ್ಳುವ ಗ್ರಾಮಗಳ ಜನರಿಗೆ ಮೂಲ ಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ಕಾಮಗಾರಿ ನಡೆಯುವ ಸ್ಥಳದಲ್ಲೇ ಅನಿರ್ದಿಷ್ಟಾವಧಿ ಮುಷ್ಕರ ಅನಿವಾರ್ಯ ಎನ್ನುತ್ತಾರೆ ರೈತ ಸಂಘದ ರಾಜ್ಯ ಘಟಕ ಉಪಾಧ‍್ಯಕ್ಷ ವೆಂಕಟನಾರಾಯಣಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.