ADVERTISEMENT

ದಲಿತ ಸಂಘಟನೆಗಳ ಐಕ್ಯತಾ ಸಮಾವೇಶಕ್ಕೆ ಸಿದ್ಧತೆ

ಡಿ.6ಕ್ಕೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 5:00 IST
Last Updated 14 ನವೆಂಬರ್ 2022, 5:00 IST
ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶದ ಕರಪತ್ರಗಳನ್ನು ವಿವಿಧ ಸಂಘಟನೆಯ ಮುಖಂಡರು ಬಿಡುಗಡೆಗೊಳಿಸಿದರು
ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶದ ಕರಪತ್ರಗಳನ್ನು ವಿವಿಧ ಸಂಘಟನೆಯ ಮುಖಂಡರು ಬಿಡುಗಡೆಗೊಳಿಸಿದರು   

ದೇವನಹಳ್ಳಿ: ‘ಸವರ್ಣೀಯರ ಹಿಡಿತದಿಂದ ದೇಶವನ್ನು ಕಾಪಾಡುವ ಪರಿಸ್ಥಿತಿ ಎದುರಾಗಿದೆ. ಕಾರ್ಪೊರೇಟ್‌ ಬಂಡವಾಳಶಾಹಿಗಳ ಎದುರು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಪ್ರಬುದ್ಧ ಭಾರತವನ್ನು ಉಳಿಸಲು ಎಲ್ಲರೂ ಒಂದಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ’ ಎಂದು ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ಅತ್ತಿಬೆಲೆ ನರಸಪ್ಪ ಪ್ರತಿಪಾದಿಸಿದರು.

ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಡಿಸೆಂಬರ್‌ 6ಕ್ಕೆ ದಲಿತರ ಸಾಂಸ್ಕೃತಿಕ ಪ್ರತಿರೋಧದ ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶದ ಕರಪತ್ರಗಳನ್ನುಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

‘ದಮನಿತರ ಹಕ್ಕುಗಳು ಮತ್ತು ಅಂಬೇಡ್ಕರ್‌ ನೀಡಿದ್ದ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಎಲ್ಲರೂ ಒಂದಾಗೋಣ... ಸಮಾವೇಶದಲ್ಲಿ ಭಾಗವಹಿಸೋಣ’ ಎಂದು ತಿಳಿಸಿದರು.

ADVERTISEMENT

‘ದೇಶಕ್ಕೆ ಸ್ವಾತಂತ್ರ್ಯ ದೊರತು 75 ವರ್ಷ ಕಳೆದರೂ ಮತ್ತೊಮ್ಮೆ ದಾಸ್ಯಕ್ಕೆ ಒಳಗಾಗುವಂತೆ ಮಾಡಲು ಆಡಳಿತಾರೂಢರು ನಿರತರಾಗಿದ್ದಾರೆ. ಎಲ್ಲ ರಂಗದಲ್ಲೂ ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿದೆ. ಸಾಮಾಜಿಕ ನ್ಯಾಯ ಕನಸಾಗಿ
ಉಳಿದಿದೆ. ನಿರುದ್ಯೋಗದಿಂದ ಯುವಕರು ಹತಾಶಗೊಂಡಿದ್ದಾರೆ. ಕೋಮು ರಾಜಕೀಯ ವಿಜೃಂಭಿಸುತ್ತಿದೆ. ನ್ಯಾಯ ಕೇಳುವವರೆಲ್ಲರೂ ದೇಶದ್ರೋಹಿಗಳಾಗುತ್ತಿದ್ದಾರೆ. ಈ ರೀತಿಯ ಧೋರಣೆ ಬದಲಾಯಿಸಲು ಎಲ್ಲರೂ ಸಮರೋಪಾದಿಯಲ್ಲಿ ಭಾಗಿಯಾಗಿ ಐಕ್ಯತೆ ಸಂದೇಶ ಪಸರಿಸೋಣ’ ಎಂದರು.

ಕೋಮು ವಿಷವು ಸಮಾಜದಲ್ಲಿ ಹೆಚ್ಚಾಗುತ್ತಿದ್ದು, ಪ್ರಗತಿಪರತೆ, ಜಾತ್ಯತೀತತೆ ಅಪಹಾಸ್ಯಕ್ಕೊಳಗಾಗುತ್ತಿದೆ. ಮತಿ ಭ್ರಮಣೆಗೆ ಸಮಾನತೆ ಉತ್ತರ ನೀಡುವ ಕಾಲ ಹತ್ತಿರವಿದ್ದು, ಕರಾಳ ಹಿಡಿತವನ್ನು ದೂರ ಮಾಡಿ ಜನರನ್ನು ಜಾಗೃತಗೊಳಿಸೋಣ. ಜನಪರ ಚಳವಳಿಗಳಿಗೆ ಬಲ ನೀಡಬೇಕಿದೆ. ದುಡಿಯುವ ಕೈಗಳಿಗೆ ಶಕ್ತಿ ತುಂಬೋಣ ಎಂದು ಹೇಳಿದರು.

ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ದಲಿತ ನಾಯಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.