ADVERTISEMENT

ಸಾರಿಗೆ ನಿಯಮ ಉಲ್ಲಂಘಿಸದಂತೆ ಸೂಚನೆ

ಖಾಸಗಿ ಬಸ್‌ ಮಾಲೀಕರ ಸಭೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 16:32 IST
Last Updated 26 ಜೂನ್ 2019, 16:32 IST
ವಿಜಯಪುರ ಪೊಲೀಸ್ ಠಾಣೆಯಲ್ಲಿ ಖಾಸಗಿ ಬಸ್ ಮಾಲೀಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಬ್‌ಇನ್‌ಸ್ಪೆಕ್ಟರ್ ನರೇಶ್‌ನಾಯಕ್ ಸಭೆ ನಡೆಸಿದರು
ವಿಜಯಪುರ ಪೊಲೀಸ್ ಠಾಣೆಯಲ್ಲಿ ಖಾಸಗಿ ಬಸ್ ಮಾಲೀಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಬ್‌ಇನ್‌ಸ್ಪೆಕ್ಟರ್ ನರೇಶ್‌ನಾಯಕ್ ಸಭೆ ನಡೆಸಿದರು   

ವಿಜಯಪುರ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ನರೇಶ್ ನಾಯಕ್ ಅವರು, ಖಾಸಗಿ ಬಸ್‌ ಮಾಲೀಕರ ಸಭೆನಡೆಸಿದರು.

ಖಾಸಗಿ ಬಸ್ಸುಗಳಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ, ಕಡ್ಡಾಯವಾಗಿ ಖಾಸಗಿ ಬಸ್‌ ಚಾಲಕರು ಸಾರಿಗೆ ನಿಯಮಗಳನ್ನು ಪಾಲನೆ ಮಾಡಬೇಕು. ನಗರದೊಳಗೆ 30 ಕೀ.ಮಿ.ವೇಗದೊಳಗೆ ವಾಹನ ಚಾಲನೆ ಮಾಡಬೇಕು. ಎಲ್ಲ ಬಸ್‌ಗಳಲ್ಲಿ ಚಾಲಕರ ಮಾಹಿತಿ ಪ್ರಕಟಿಸಬೇಕು. ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಂಡಿರಬೇಕು. ಚಾಲಕರು ಸಮವಸ್ತ್ರ ಧರಿಸಿರಬೇಕು. ಬಸ್ಸುಗಳಿಗೆ ಸಂಬಂಧಿಸಿದಂತೆ ವಿಮಾ ಪ್ರತಿಗಳು, ಪರ್ಮಿಟ್, ಚಾಲನಾ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಇಟ್ಟುಕೊಂಡಿರಬೇಕು ಎಂದು ಸೂಚಿಸಿದರು.

‘ನಗರದ ವ್ಯಾಪ್ತಿಯಲ್ಲಿ ಶಬ್ದ ಮಾಡುವಂತಿಲ್ಲ. ಬಸ್ಸಿನಲ್ಲಿರುವ ಸೀಟುಗಳಿಗಿಂತ ಹೆಚ್ಚಿನ ಜನರನ್ನು ಹತ್ತಿಸಿಕೊಳ್ಳುವಂತಿಲ್ಲ. ರಸ್ತೆಬದಿಗಳಲ್ಲಿ ಬಸ್‌ ನಿಲ್ಲಿಸುವಂತಿಲ್ಲ. ಪಕ್ಕದಲ್ಲಿ ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ಬಸ್ಸುಗಳಲ್ಲಿ ಪ್ರಯಾಣಿಕರು ಬಾಗಿಲುಗಳಲ್ಲಿ ನೇತಾಡಿಕೊಂಡು ಪ್ರಯಾಣಿಸದಂತೆ ನೋಡಿಕೊಳ್ಳಬೇಕು. ಇನ್ನು ಮುಂದೆ ಇಂತಹ ಘಟನೆಗಳು ಕಂಡು ಬಂದರೆ ನೇರವಾಗಿ ಸಾರಿಗೆ ಇಲಾಖೆಗೆ ಶಿಫಾರಸು ಮಾಡಿ ಬಸ್ಸುಗಳನ್ನು ವಶಕ್ಕೆ ಪಡೆದು ಕೇಸು ದಾಖಲಿಸಲಾಗುತ್ತದೆ’ ಎಂದರು.

ADVERTISEMENT

ನಗರದ ಪ್ರಮುಖ ವೃತ್ತಗಳಲ್ಲಿ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ವಾಹನಗಳ ಚಲನವಲನಗಳನ್ನು ಗುರುತಿಸಬಹುದು ಎಂಬ ಸಲಹೆಗಳು ಕೇಳಿ ಬಂದವು.

ಖಾಸಗಿ ಬಸ್‌ಗಳು ಈ ಭಾಗದಲ್ಲಿ ಸಂಚರಿಸಲು ಅವಕಾಶವನ್ನೆ ಕೊಡಬಾರದು ಎಂದು ಕೆಲ ಸಂಘಟನೆಗಳ ಮುಖಂಡರು ಪಟ್ಟು ಹಿಡಿದಿದ್ದರು. ಸಾರಿಗೆ ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಜಾಗರೂಕತೆಯಿಂದ ಬಸ್ಸುಗಳನ್ನು ಚಾಲನೆ ಮಾಡುವಂತೆ ನೋಡಿಕೊಳ್ಳುತ್ತೇವೆ ಎಂದು ಮಾಲೀಕರು ಭರವಸೆ ನೀಡಿದರು. ಖಾಸಗಿ ಬಸ್‌ ಮಾಲೀಕರು, ವಿವಿಧ ಸಂಘಟನೆಗಳ ಮುಖಂಡರು, ಪೊಲೀಸ್ ಸಿಬ್ಬಂದಿ ಸಿದ್ದಲಿಂಗಪ್ಪ, ವೆಂಕಟೇಶ್, ಎಸ್.ಬಿ.ನಾಯಕ್, ಟಿ.ಮುನಿರಾಜು, ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.