ADVERTISEMENT

ಶಿವದೀಕ್ಷೆ-, ಲಿಂಗದೀಕ್ಷೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 3:02 IST
Last Updated 24 ಜೂನ್ 2022, 3:02 IST
ವಿಜಯಪುರ ಪಟ್ಟಣದ ನಗರೇಶ್ವರಸ್ವಾಮಿ ದೇವಾಲಯದ ಪ್ರಾರ್ಥನಾ ಮಂದಿರದಲ್ಲಿ, ಮೈಸೂರಿನ ಸುತ್ತೂರು ಮಠದ ಧಾರ್ಮಿಕ ದತ್ತಿಯ ಸಂಚಾಲಕ ಸೋಮಶೇಖರ ಸ್ವಾಮೀಜಿ ಶಿವದೀಕ್ಷೆ, ಲಿಂಗದೀಕ್ಷೆ ನೀಡಿದರು
ವಿಜಯಪುರ ಪಟ್ಟಣದ ನಗರೇಶ್ವರಸ್ವಾಮಿ ದೇವಾಲಯದ ಪ್ರಾರ್ಥನಾ ಮಂದಿರದಲ್ಲಿ, ಮೈಸೂರಿನ ಸುತ್ತೂರು ಮಠದ ಧಾರ್ಮಿಕ ದತ್ತಿಯ ಸಂಚಾಲಕ ಸೋಮಶೇಖರ ಸ್ವಾಮೀಜಿ ಶಿವದೀಕ್ಷೆ, ಲಿಂಗದೀಕ್ಷೆ ನೀಡಿದರು   

ವಿಜಯಪುರ: ಪಟ್ಟಣದ ಇತಿಹಾಸ ಪ್ರಸಿದ್ಧ ನಗರೇಶ್ವರಸ್ವಾಮಿ ದೇವಾಲಯದ ಪ್ರಾರ್ಥನಾ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಸಮಾಜ, ನಗರ್ತ ಯುವಕ ಸಂಘ, ಲಿಂಗಾಯತ ಮಹಾಸಭಾ, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಸಹಯೋಗದೊಂದಿಗೆ ಧರ್ಮಪ್ರಸಾರ ಹಾಗೂ ಮಕ್ಕಳಿಗೆ ಶಿವದೀಕ್ಷೆ- ಲಿಂಗದೀಕ್ಷೆ ನೀಡುವ ಪೂಜಾ ಕಾರ್ಯಕ್ರಮದಲ್ಲಿ 20 ಮಕ್ಲಳಿಗೆ ದೀಕ್ಷೆ ನೀಡಿದರು.

ಮೈಸೂರಿನ ಸುತ್ತೂರು ಮಠದ ಧಾರ್ಮಿಕ ದತ್ತಿಯ ಸಂಚಾಲಕ ಸೋಮಶೇಖರ ಸ್ವಾಮೀಜಿ ಅವರು ಶಿವ ದೀಕ್ಷೆ ನೀಡಿ, ಧರ್ಮೋಪದೇಶವನ್ನು ಬೋಧನೆ ಮಾಡಿದರು.

ಸೋಮಶೇಖರ ಸ್ವಾಮೀಜಿ ಮಾತನಾಡಿ, ‘ವಚನಕಾರ ಶರಣರ ಪರಿಕಲ್ಪನೆಯಂತೆ, ಇಷ್ಟಲಿಂಗ ಪೂಜೆಯನ್ನು ಇಷ್ಟಲಿಂಗ
ಧರಿಸಿದವನೇ ಮಾಡಬೇಕು. ಬೇರೆ ಮತ್ತೊಬ್ಬರಿಂದ ಮಾಡಿಸಲು ಬರುವುದಿಲ್ಲ. ಭವಚಕ್ರದಿಂದ ತಪ್ಪಿಸಿಕೊಳ್ಳಬಯಸಿ, ಆಧ್ಯಾತ್ಮಿಕ ಜೀವನ ನಡೆಸಬಯಸುವ ಭಕ್ತ, ಸದ್ಗುರುವಿನ ಬಳಿ ಬಂದು ದೀಕ್ಷಾ ಮೂಲಕ ಇಷ್ಟಲಿಂಗ ಪಡೆಯಬೇಕು’ ಎಂದು ತಿಳಿಸಿದರು.

ADVERTISEMENT

ಟೌನ್ ವೀರಶೈವ ಸಮಾಜದ ಅಧ್ಯಕ್ಷ ಎಸ್.ವಿ.ಬಸವರಾಜು ಮಾತನಾಡಿ, ‘ಶಿವದೀಕ್ಷೆಯು ಅಜ್ಞಾನದ ಅಂಧಕಾರದಿಂದ ಬಿಡುಗಡೆ ಮಾಡಿ, ಬೆಳಕಿನ ಕಡೆಗೆ ಮುನ್ನಡೆಸಲಿಕ್ಕೆ ಸಹಕಾರಿಯಾಗುತ್ತದೆ. ಆದ್ದರಿಂದ ದೀಕ್ಷೆ ಪಡೆದವರು ಗುರುಗಳು ನೀಡಿದ ಮಾರ್ಗದರ್ಶನವನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.

ಮುಖಂಡರಾದ ಎಸ್.ಆರ್.ಎಸ್. ಬಸವರಾಜ್, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ವಿರೂಪಾಕ್ಷಪ್ಪ, ನಗರ್ತ ಯುವಕ ಸಂಘದ ಅಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ಮುರಳಿಧರ್, ಅವಿನಾಶ್, ಎನ್.ರುದ್ರಮೂರ್ತಿ, ಅಕ್ಕನ ಬಳಗದ ಮಹದೇವಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.