ADVERTISEMENT

‘ಉದ್ಯೋಗ ಪಡೆಯಲು ಪದವಿಯಷ್ಟೇ ಕೌಶಲ ಮುಖ್ಯ’: ಶ್ರೀನಿವಾಸ್‌

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 14:07 IST
Last Updated 25 ಫೆಬ್ರುವರಿ 2020, 14:07 IST
ಸಸಿಗೆ ನೀರು ಹಾಕುವ ಮೂಲಕ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಭೂಶಂಕರ್ ‘ಯುವ ಕೌಶಲ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿದರು
ಸಸಿಗೆ ನೀರು ಹಾಕುವ ಮೂಲಕ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಭೂಶಂಕರ್ ‘ಯುವ ಕೌಶಲ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿದರು   

ದೊಡ್ಡಬಳ್ಳಾಪುರ: ಯಾವುದೇ ಕಂಪನಿ ಅಥವಾ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಲು ಪದವಿ ಇದ್ದರಷ್ಟೇ ಸಾಲದು ಕೌಶಲವೂ ಮುಖ್ಯ. ಈ ಹಿನ್ನೆಲೆಯಲ್ಲಿ ಯುವ ಸಮುದಾಯಕ್ಕೆ ಕೌಶಲ ತರಬೇತಿಯನ್ನು ಎಲ್ಲ ತಾಲ್ಲೂಕುಗಳಲ್ಲೂ ನೀಡಲಾಗುತ್ತಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಶ್ರೀನಿವಾಸ್‌ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಉದ್ಯೋಗಾಕಾಂಕ್ಷಿಗಳಿ‌ಗೆ ಏರ್ಪಡಿಸಲಾಗಿದ್ದ ‘ಯುವ ಕೌಶಲಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ದೇಶದ ಆರ್ಥಿಕ ಪ್ರಗತಿಯಲ್ಲಿ ಯುವ ಸಮುದಾಯದ ಪಾತ್ರ ದೊಡ್ಡದಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿವೆ. ಈ ಯೋಜನೆಗಳಡಿ ನುರಿತ ತಜ್ಞರಿಂದ ತರಬೇತಿ, ಉಪನ್ಯಾಸ ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ವಿಶ್ವದ ಇತರೆ ದೇಶಗಳಿಗಿಂತಲು ಭಾರತದ ಸೇವಾ ವಲಯ ಸಾಕಷ್ಟು ವಿಸ್ತಾರವಾಗಿ ಬೆಳೆಯುತ್ತಿದೆ. ಆದರೆ, ಯುವಕರಲ್ಲಿ ಕೌಶಲದ ಕೊರತೆ ಹೆಚ್ಚಾಗಿದೆ. ಇದನ್ನು ಹೋಗಲಾಡಿಸಲು 18 ವರ್ಷ ತುಂಬಿರುವ ಪ್ರತಿಯೊಬ್ಬರು ಕೌಶಲ ಅಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಇದರಿಂದಸರ್ಕಾರ ಆಯೋಜಿಸುವ ಉದ್ಯೋಗ ಮೇಳಗಳು, ಕೌಶಲ ತರಬೇತಿ ಕಾರ್ಯಾಗಾರಗಳ ಮಾಹಿತಿಗಳು ಅಭ್ಯರ್ಥಿಗಳಿಗೆ ಲಭ್ಯವಾಗಲಿವೆ ಎಂದು ವಿವರಿಸಿದರು.

ಸಸಿಗೆ ನೀರು ಹಾಕುವ ಮೂಲಕ ಕೌಶಲ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಭೂಶಂಕರ್ ಮಾತನಾಡಿ, 18 ರಿಂದ 30 ವರ್ಷದ ಒಳಗಿನ ಎ‌ಲ್ಲ ವಿದ್ಯಾರ್ಥಿಗಳಿಗೂ ಇಲಾಖೆ ವತಿಯಿಂದ ಅಗತ್ಯ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು. ಸರ್ಕಾರಿ ಇಲಾಖೆ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯುವಾಗ ಕೌಶಲ ತರಬೇತಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದರೆ ಅವರಿಗೆ ಪ್ರಥಮ ಆದ್ಯತೆ ದೊರೆಯಲಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀನಿವಾಸಯ್ಯ ವಹಿಸಿದ್ದರು. ಕಾಲೇಜಿನ ಕೌಶಲ ಅಭಿವೃದ್ಧಿ ಸಮನ್ವಯಾಧಿಕಾರಿ ಸಿದ್ಧರಾಮುರಾಜು ಸೇರಿದಂತೆ ತಾಲ್ಲೂಕಿನ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಮತ್ತು ತರಬೇತುದಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.