ADVERTISEMENT

ಸಮಾಜಶಾಸ್ತ್ರದ ಮಹತ್ವ ತಿಳಿಸಿದ ಲೇಖಕ

ಡಾ.ಎಚ್‌.ಎಂ.ಮರುಳಸಿದ್ದಯ್ಯ ಅವರಿಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 14:30 IST
Last Updated 29 ಅಕ್ಟೋಬರ್ 2018, 14:30 IST
ವಿಜಯಪುರದ ಗಾಂಧೀಚೌಕದಲ್ಲಿ ಕಸಾಪ ಕಚೇರಿಯಲ್ಲಿ ಸಮಾಜ ಶಾಸ್ತ್ರಜ್ಞ ಡಾ.ಎಚ್‌.ಎಂ.ಮರುಳಸಿದ್ದಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು
ವಿಜಯಪುರದ ಗಾಂಧೀಚೌಕದಲ್ಲಿ ಕಸಾಪ ಕಚೇರಿಯಲ್ಲಿ ಸಮಾಜ ಶಾಸ್ತ್ರಜ್ಞ ಡಾ.ಎಚ್‌.ಎಂ.ಮರುಳಸಿದ್ದಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು   

ವಿಜಯಪುರ: ‘ಸಮಾಜದ ನಾನಾ ಸಮಸ್ಯೆಗಳಿಗೆ ಕಾರಣ ಹುಡುಕಿ ಅವುಗಳನ್ನು ಎಲ್ಲ ನೆಲೆಗಳಿಂದ ಅಧ್ಯಯನ ಮಾಡಿ, ಸಮಾಜಕಾರ್ಯದ ಮಹತ್ವವನ್ನು ಕನ್ನಡಿಗರಿಗೆ ಶಾಸ್ತ್ರೀಯವಾಗಿ ಹೇಳಿಕೊಟ್ಟ ಹಿರಿಮೆ ಹೊಂದಿದ್ದ ಲೇಖಕ, ಸಮಾಜಶಾಸ್ತ್ರಜ್ಞ ಡಾ.ಎಚ್‌.ಎಂ.ಮರುಳಸಿದ್ದಯ್ಯ ಅವರಿಗೆ ಸಲ್ಲುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಹೇಳಿದರು.

ಇಲ್ಲಿನ ಗಾಂಧೀಚೌಕದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ದೆಹಲಿಯ ವಿಶ್ವವಿದ್ಯಾಲಯದಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ವಾರಣಾಶಿ ಕಾಶಿ ವಿದ್ಯಾಪೀಠದಿಂದ ಪಿಎಚ್‌.ಡಿ ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಸಮಾಜಕಾರ್ಯ ವಿಭಾಗ ಆರಂಭಿಸಿ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು ಎಂದರು.

ADVERTISEMENT

ಕರ್ನಾಟಕ ಸುಂದರವಾಗಿದೆ. ಆದರೆ, ನಿರ್ಮಲವಾಗಿಲ್ಲ ಎನ್ನುತ್ತಿದ್ದ ಅವರು, 'ನಿರ್ಮಲ ಕರ್ನಾಟಕ' ಎಂಬ ಪದಪುಂಜವನ್ನು ಟಂಕಿಸುವ ಮೂಲಕ ಶಿಷ್ಯರೊಂದಿಗೆ ಬಳ್ಳಾರಿ, ಬೆಂಗಳೂರು ಹಾಗೂ ಇತರ ಜಿಲ್ಲೆಯ ಹಳ್ಳಿಗಳಲ್ಲಿ ನೈರ್ಮಲ್ಯ ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದರು. ಮೊದಲ ಬಾರಿಗೆ ಸ್ವಚ್ಛತೆಯ ಅರಿವು ಮೂಡಿಸಿದ್ದರು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ‘ಇತ್ತೀಚೆಗೆ ಕೂಡ್ಲಿಗಿ ತಾಲ್ಲೂಕು ಹಿರೇಕುಂಬಳಗುಂಟೆ ಗ್ರಾಮದಲ್ಲಿದ್ದ ಸ್ವಂತ ಮನೆಯನ್ನು ಶಿಕ್ಷಣ ಇಲಾಖೆಗೆ ದಾನವಾಗಿ ನೀಡಿದ್ದಾರೆ. ಅಲ್ಲಿ ಅವರ ಆಶಯದಂತೆ ಗ್ರಾಮೀಣ ಜನರು ಓದಲು ‘ಪುಸ್ತಕ ಮನೆ’ ಸ್ಥಾಪಿಸಿ ಸಾವಿರಾರು ಪುಸ್ತಕಗಳನ್ನು ಇರಿಸಿದ್ದಾರೆ. ಜ್ಞಾನಾರ್ಜನೆಗೆ ಪೂರಕವಾಗಿ ಅವರು ಹಲವು ಕೊಡುಗೆ ನೀಡಿದ್ದಾರೆ. ಇಂತಹ ಸರಳ ಸಜ್ಜನಿಕೆಯ ವ್ಯಕ್ತಿಗಳು ನಮಗೆ ಮಾದರಿಯಾಗಬೇಕು’ ಎಂದರು.

ತಾಲ್ಲೂಕು ಅಧ್ಯಕ್ಷ ಎಸ್.ರಾಮಕೃಷ್ಣ ಹೆಗಡೆ, ನಗರ ಘಟಕದ ಅಧ್ಯಕ್ಷ ಜೆ.ಆರ್ ಮುನಿವೀರಣ್ಣ, ಚೌಡೇಗೌಡ, ರಾಮು ಭಗವಾನ್, ಎಂ.ವಿ.ನಾಯ್ಡು, ಮಹಾತ್ಮಾಂಜನೇಯ, ಶೀಲಾ ಸುರೇಶ್, ದೀಪ ಮುರಳಿದರ್, ವಿಶ್ವನಾಥ್, ಪಿ ಪ್ರಕಾಶ್, ಮಲ್ಲಿಕಾರ್ಜುನಯ್ಯ.ಕೆ, ಚಂದ್ರಶೇಖರ್, ಗೋಪಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.