ADVERTISEMENT

ಆನ್‌ಲೈನ್‌ನಲ್ಲಿ ಎಸ್ಸೆಸ್ಸೆಲ್ಸಿ ಮಾದರಿ ಪ್ರಶ್ನೆ ಪತ್ರಿಕೆ

ಜಿಲ್ಲೆಯಾದ್ಯಂತ ಪ್ರಾಯೋಗಿಕ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 17:35 IST
Last Updated 4 ಜೂನ್ 2020, 17:35 IST

ದೇವನಹಳ್ಳಿ: ರಾಜ್ಯ ಸರ್ಕಾರವು ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂನ್ 25ರಿಂದ ದಿನಾಂಕವನ್ನು ನಿಗದಿಪಡಿಸಿರುವ ಬೆನ್ನಲ್ಲಿಯೇ ಪರೀಕ್ಷೆ ಸಮೀಪ ಬರುತ್ತಿರುವುದರಿಂದ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಇಂದಿನಿಂದ(ಜೂನ್ 5) ಜಿಲ್ಲಾದ್ಯಂತ ಆನ್‌ಲೈನ್‌ನಲ್ಲಿ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಮಾದರಿ ಪ್ರಶ್ನೆ ಪತ್ರಿಕೆ ತಂತ್ರ ರೂಪಿಸಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾ ಮಾರೇಗೌಡ ತಿಳಿಸಿದ್ದಾರೆ.

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಜಿಲ್ಲೆಯಲ್ಲಿ ಜೂನ್ 5ರಿಂದ ಏಕಕಾಲದಲ್ಲಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಆನ್‌ಲೈನ್‌ ಮೂಲಕ ಪ್ರಕಟಿಸಲಿದೆ. ಪ್ರತಿ ದಿನ ಒಂದೊಂದು ವಿಷಯದಂತೆ ವಾರದ 7 ದಿನವೂ ಆನ್ ಲೈನ್ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲು ಸಿದ್ಧತೆ ನಡೆಸಿದೆ. ಆಯ್ಕೆ ಮಾದರಿಯ 50 ಪ್ರಶ್ನೆಗಳನ್ನು ಆನ್ ಲೈನ್‌ನಲ್ಲಿ ಪ್ರಕಟಿಸಲಿದ್ದು ಉತ್ತರ ಪತ್ರಿಕೆಯಲ್ಲಿ 4 ಆಯ್ಕೆ ನೀಡಲಾಗಿರುತ್ತದೆ. ವಿದ್ಯಾರ್ಥಿಗಳು ಸರಿ ಉತ್ತರವನ್ನು ಆಯ್ಕೆ ಮಾಡಿ ಸೆಂಡ್ ಮಾಡಿದರೆ ಅದು ಆನ್‌ಲೈನ್‌ನಲ್ಲಿ ಸ್ವೀಕೃತವಾಗುತ್ತದೆ. ಪ್ರತಿ ದಿನ ಸಂಜೆ 5 ಗಂಟೆಗೆ ಇಡೀ ಪ್ರಶ್ನೆ ಪತ್ರಿಕೆಗಳ ಸರಿ ಉತ್ತರ ಪ್ರಕಟಗೊಳ್ಳಲಿದೆ. ಇದರ ಮೂಲಕ ವಿದ್ಯಾರ್ಥಿಗಳು ತಪ್ಪಾದ ಪ್ರಶ್ನೆಗೆ ಉತ್ತರ ನೀಡಿದ್ದದನ್ನು ಸರಿಪಡಿಸಿಕೊಂಡು ಪರೀಕ್ಷೆಗೆ ಸಿದ್ದವಾಗಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಪರೀಕ್ಷೆ ಪ್ರಾರಂಭವಾಗುವವರೆಗೂ ಇದೇ ರೀತಿ ಪ್ರಶ್ನೆ ಪತ್ರಿಕೆಗಳನ್ನು ನೀಡುವುದರಿಂದ ಮಕ್ಕಳಲ್ಲಿ ಪರೀಕ್ಷೆಯ ಭಯ ತಿಳಿಯಾಗುವುದಲ್ಲದೆ ಯಾವ ವಿಷಯಕ್ಕೆ ಒತ್ತು ನೀಡಬೇಕು ಎಂಬುವುದು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಅರಿವಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಸ್ತುತ ಜಿಲ್ಲೆಯಲ್ಲಿ 12,252 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಕಳೆದ ಬಾರಿಯಂತೆ 53 ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ ನಡೆದಿದೆ. ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ ಶಾಲೆಗಳ ಆಯಾ ಮುಖ್ಯ ಶಿಕ್ಷಕರಿಗೆ ಜವಾಬ್ದಾರಿ ಈಗಾಗಲೆ ನೀಡಲಾಗಿದ್ದು ಮುಖ್ಯ ಶಿಕ್ಷಕರು ಆಯಾ ಶಾಲೆಯ ವಿಷಯವಾರು ಶಿಕ್ಷಕರ ಮೂಲಕ ವಾಟ್ಸ್ಆ್ಯಪ್‌ ಗ್ರೂಪ್ ರಚನೆ ಮಾಡಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫೋನ್ ಸಂಖ್ಯೆಯನ್ನು ಗ್ರೂಪ್ ನಲ್ಲಿ ಸಂಪರ್ಕ ಕಲ್ಪಿಸಿ ಪಶ್ನೆ ಪತ್ರಿಕೆಯನ್ನು ಏಕ ಕಾಲದಲ್ಲಿ ಗ್ರೂಪ್‌ನಲ್ಲಿ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ಸ್ಮಾರ್ಟ್‌ ಫೋನ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ನೆಟ್ ವರ್ಕ್ ಸಮಸ್ಯೆ ಬಂದರೂ ಸಂಜೆ ಬಳಿಕ ಇಡೀ ಪ್ರಶ್ನೆ ಪತ್ರಿಕೆಯ ಕೀ ಉತ್ತರಗಳು ದೊರೆಯುತ್ತವೆ. ವಿದ್ಯಾರ್ಥಿಗಳು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.