ADVERTISEMENT

ದೇವನಹಳ್ಳಿ: 2020ಸಮಾಜದ ಡೊಂಕು ತಿದ್ದಿದ ತಾತಯ್ಯ

ದೇವನಹಳ್ಳಿ: ಶ್ರೀಯೋಗಿ ನಾರೇಯಣ ಯತೀಂದ್ರರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 6:12 IST
Last Updated 8 ಮಾರ್ಚ್ 2023, 6:12 IST
ದೇವನಹಳ್ಳಿ ಪಟ್ಟಣದ ಮಿನಿ ವಿಧಾನಸೌಧದ ನ್ಯಾಯಾಲಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಶ್ರೀಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ನಡೆಯಿತು
ದೇವನಹಳ್ಳಿ ಪಟ್ಟಣದ ಮಿನಿ ವಿಧಾನಸೌಧದ ನ್ಯಾಯಾಲಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಶ್ರೀಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ನಡೆಯಿತು   

ದೇವನಹಳ್ಳಿ: ‘ಕೈವಾರ ತಾತಯ್ಯ ಸಮಾಜದಲ್ಲಿನ ಅಂಕುಡೊಂಕು ತಿದ್ದಲು ಹಾಗೂ ಜನತೆಯಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಹಳ್ಳಿ ಹಳ್ಳಿಗೂ ಸುತ್ತಿದ್ದ ಮಹಾನುಭಾವರಾಗಿದ್ದಾರೆ’ ಎಂದು ಶಿರಸ್ತೇದಾರ್‌ ಭರತ್‌ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಶ್ರೀಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

500 ವರ್ಷಗಳ ಹಿಂದೆಯೇ ಕಾಲ ಜ್ಞಾನದ ಬಗ್ಗೆ ತಿಳಿಸಿದ ತ್ರಿಕಾಲ ಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರರು ಹೇಳಿರುವ ಪ್ರತಿಯೊಂದು ಅಂಶಗಳು ನಡೆಯುತ್ತಿವೆ. ಯತೀಂದ್ರರು ಭಕ್ತಕೋಟಿಗೆ ಆತ್ಮೋದ್ಧಾರದ ಮಾರ್ಗದರ್ಶನ ಮಾಡಿದ ತಾತಯ್ಯ ಎನಿಸಿಕೊಂಡಿದ್ದಾರೆ. ಜನತೆಯಲ್ಲಿನ ಮಿಥ್ಯಾಚರಣೆಗಳನ್ನು ತೊಲಗಿಸಿ ಪ್ರಗತಿ ಪಥ ನಿರ್ಮಿಸಿದ ಸಮಾಜ ಸುಧಾರಕ ಎಂದು ಬಣ್ಣಿಸಿದರು.

ADVERTISEMENT

ಯತೀಂದ್ರರು ದೀನ ದಲಿತರ ಬಗೆಗೆ ಸೇವಾಭಾವ ಮೂಡಿಸಿ ಅಲೌಕಿಕ ಮಹಿಮೆಗಳನ್ನು ತೋರಿದ ಪವಾಡ ಪುರುಷ. ಭೌತಿಕ ಸುಖಗಳನ್ನು ತುಚ್ಛವಾಗಿ ಪರಿಗಣಿಸಿ ತ್ಯಾಗ ಮಾಡಿದ ವೈರಾಗ್ಯ ಪುರುಷರೂ ಆಗಿದ್ದಾರೆ. ಅಷ್ಟಾಂಗ ಯೋಗ, ಹಠ ಯೋಗ, ರಾಜಯೋಗಾದಿ ಮಾರ್ಗದಿಂದ ಶೋಧನೆ ಮಾಡಿ ಸಾರ್ವಜನಿಕರ ಉದ್ಧಾರಕ್ಕಾಗಿ ಕಾಲಜ್ಞಾನವನ್ನು ನೀಡಿದ್ದಾರೆ ಎಂದರು.

ಶಿರಸ್ತೇದಾರ್‌ ಶಶಿಕಲಾ ಮಾತನಾಡಿ, ಯತೀಂದ್ರರು ಮುಂದೆ ನಡೆಯುವ ಅನೇಕ ಘಟನೆಗಳನ್ನು ತಮ್ಮ ದಿವ್ಯದೃಷ್ಟಿಯಿಂದ ತಿಳಿದು ಅಂದೇ ನಮಗೆ ತಿಳಿಸಿದ್ದಾರೆ. ಅವರು ಅಂದು ಕಾಲಜ್ಞಾನದಲ್ಲಿ ತಿಳಿಸಿರುವಂತೆ ಈಗಲೂ ಅನೇಕ ಘಟನೆಗಳು ಸಂಭವಿಸಿ ವಿಸ್ಮಯ ಮೂಡಿಸಿವೆ. ಪವಾಡ ಪುರುಷ, ಕವಿ, ದಾರ್ಶನಿಕ, ಸಮಾಜ ಸುಧಾರಕರಾದ ತಾತಯ್ಯ ಅವರು ನಾಡಿಗೆ ನೀಡಿರುವ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.

ವಿಷಯ ನಿರ್ವಾಹಕ ಮಹೇಶ್, ಮುಜರಾಯಿ ಶಾಖೆಯ ಕಾವ್ಯ ಹಾಗೂ ತಾಲ್ಲೂಕು ಕಚೇರಿ ಸಿಬ್ಬಂದಿ ಇದ್ದರು.

ಗೈರುಹಾಜರಿ: ಬಲಜಿಗ ಸಮುದಾಯದ ಮುಖಂಡರು ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು. ಪೂರ್ವಬಾವಿ ಸಭೆ ಕರೆಯದೆ ದಿಢೀರ್‌ ಆಗಿ ತಾಲ್ಲೂಕು ಆಡಳಿತ ಕಾರ್ಯಕ್ರಮ ಮಾಡುತ್ತಿದೆ. ಇದಕ್ಕಾಗಿ ನಾವು ಗೈರುಹಾಜರಾಗಿದ್ದೇವೆ ಎಂದು ಸಮುದಾಯದ ಮುಖಂಡ ರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.