ADVERTISEMENT

ಶಿವನಿಗೆ ಪ್ರಿಯ ತುಂಬೆ ಗಿಡ

ವಿಜಯಪುರ: ಹಲವಾರು ಔಷಧೀಯ ಅಂಶಗಳ ಭಂಡಾರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 4:21 IST
Last Updated 30 ಸೆಪ್ಟೆಂಬರ್ 2020, 4:21 IST
ವಿಜಯಪುರದ ಸಮೀಪದ ಹೊಲದಲ್ಲಿ ಬೆಳೆದಿರುವ ತುಂಬೆ ಗಿಡದಲ್ಲಿನ ಬಿಳಿ ಹೂಗಳು
ವಿಜಯಪುರದ ಸಮೀಪದ ಹೊಲದಲ್ಲಿ ಬೆಳೆದಿರುವ ತುಂಬೆ ಗಿಡದಲ್ಲಿನ ಬಿಳಿ ಹೂಗಳು   

ವಿಜಯಪುರ: ತುಂಬೆ ಗಿಡ ಅಂದ ಕೂಡಲೇ ಸಹಜವಾಗಿ ಎಲ್ಲರಿಗೂ ನೆನಪಾಗುವುದು ಶಿವ. ಶಿವನಿಗೆ ಪ್ರಿಯವೆನ್ನಲಾದ ತುಂಬೆಗಿಡದಲ್ಲಿ ಉತ್ತಮ ಆರೋಗ್ಯ ಗುಣಗಳಿವೆ. ಹಲವು ಆರೋಗ್ಯ ಸಮಸ್ಯೆಗಳಿಗೂ ಉತ್ತಮ ಪರಿಹಾರಗಳಿವೆ. ಆದರೆ, ಹಿತ್ತಲಗಿಡ ಮದ್ದಲ್ಲ ಎನ್ನುವುದನ್ನು ತಲೆಯಲ್ಲಿ ತುಂಬಿಕೊಂಡಿರುವ ಜನರು ಹಿತ್ತಲಲ್ಲಿ ಬೆಳೆಯುವ ಇಂತಹ ಔಷಧಿ ಸಸ್ಯಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ ಎಂದು ಹಿರಿಯ ನಾಗರಿಕ ಶ್ರೀರಾಮಯ್ಯ ಹೇಳುತ್ತಾರೆ.

ತುಂಬೆ ಗಿಡ. ಕೆಲವು ಪ್ರದೇಶದಲ್ಲಿ ಶಿವನಿಗೆ ಪ್ರಿಯವಾದ ಹೂವು ಅಂತ ಪರಿಗಣಿಸಲ್ಪಡುತ್ತದೆ. ಇದು ರುದ್ರಪುಷ್ಪ ಅಂತಲೂ ಪ್ರಚಲಿತವಾಗಿದ್ದು, ಔಷಧೀಯ ಸಸ್ಯವೂ ಆಗಿದೆ. ಪುರಾಣದ ಪ್ರಕಾರ ಶಿವನ ದೇಹದಲ್ಲಿ ವಿಷ ಸೇರಿದಾಗ ಅದರ ನಿವಾರಣೆಗೆ ತುಂಬೆ ಹೂವುಗಳನ್ನು ಬಳಸಿದ್ದರಿಂದಾಗಿ ಈಗಲೂ ಕೂಡ ಶಿವನಿಗೆ ತುಂಬೆ ಪುಷ್ಪ ಅರ್ಪಿಸುವ ಪರಿಪಾಠ ರೂಢಿಯಲ್ಲಿದೆ.

ಸಂಸ್ಕೃತದಲ್ಲಿ ದ್ರೋಣ ಪುಷ್ಪ ಇಲ್ಲವೇ ಚಿತ್ರಕ್ಷುಪ ಎಂದು ಕರೆಯಲ್ಪಡುವ ಈ ತುಂಬೆ ಆಯುರ್ವೇದಿಯವಾಗಿ ಹಲವು ಕಾರಣಗಳಿಂದ ಬಳಕೆಯಲ್ಲಿದೆ. ತೆಲುಗಿನವರು ಇದನ್ನು ತುಮ್ಮಿಚೆಟ್ಟು ಎಂದು ಕರೆಯುತ್ತಾರೆ. ಬಣ್ಣಗಳಿಂದಲೂ ಇರುತ್ತದೆ. ಬಿಳಿಬಣ್ಣದಲ್ಲಿರುವುದೇ ಹೆಚ್ಚು. ತೀರಾ ದೊಡ್ಡದಾಗಿ ಬೆಳೆಯದ ಈ ಗಿಡ ಅತ್ಯಂತ ಶ್ರೇಷ್ಠವೆನಿಸಿದ್ದು ಔಷಧೀಯವಾಗಿ ಹೆಚ್ಚು ಬಳಕೆಯಲ್ಲಿದೆ ಎನ್ನುತ್ತಾರೆ ಇದನ್ನು ಬಳಸುವವರು.

ADVERTISEMENT

ಹಿರಿಯ ಮಹಿಳೆ ನಾರಾಯಣಮ್ಮ ಅವರು ಹೇಳುವ ಪ್ರಕಾರ, ‘ಕಣ್ಣಿನ ಸುತ್ತಲೂ ಕಪ್ಪು ವರ್ತುಲದ ಸಮಸ್ಯೆ ಇದ್ದರೆ ಆಗಾಗ ಕಣ್ಣಿನ ಉರಿ ಕಾಣಿಸಿಕೊಳ್ಳುವುದು, ಕಣ್ಣು ಕೆಂಪಗಾಗುವ ಸಮಸ್ಯೆ ಇದ್ದರೆ ತುಂಬೆ ಗಿಡದ ರಸಕ್ಕೆ ಸ್ವಲ್ಪ ತಣ್ಣನೆಯ ನೀರು ಇಲ್ಲವೇ ಹಾಲು
ಸೇರಿಸಿ ಅದರಿಂದ ಮುಖ ತೊಳೆದುಕೊಂಡರೆ ಕಣ್ಣು ತಂಪಾಗುತ್ತದೆ. ಒಂದಷ್ಟು ತುಂಬೆ ಗಿಡದ ಎಲೆ ಮತ್ತು ಕಾಂಡವನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ನಂತರ ಒಂದು ಬಟ್ಟೆಯನ್ನು ಅದರಲ್ಲಿ ಮುಳುಗಿಸಿ ತೆಗೆದು ಬಿಸಿಬಿಸಿ
ಶಾಖವನ್ನು ನೋವಿರುವ ಜಾಗಕ್ಕೆ ಒತ್ತಿಕೊಂಡರೆ ಊತ ನಿವಾರಣೆಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಈ ಶಾಖ ನೀಡುವ ಪದ್ಧತಿ ಹಿಂದಿನಿಂದಲೂ ಇದೆ. ತುಂಬೆ ಗಿಡದ ಶಾಖ ಯಾವುದೇ ರೀತಿಯ ಊತದ ನೋವು ನಿವಾರಣೆಯಲ್ಲಿ ಸಹಾಯ ಮಾಡುತ್ತದೆ ಎನ್ನುತ್ತಾರೆ. ತುಂಬೆಗಿಡವನ್ನು ಬಿಸಿನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ. ಸ್ವಲ್ಪ ಉಪ್ಪು ಮಿಶ್ರಣದ ಕಷಾಯವು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಉದರದ ಸಮಸ್ಯೆಯ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಪಂಡಿತ ಶಿವರಾಜಪ್ಪ ಹೇಳುತ್ತಾರೆ.

‘15 ರಿಂದ 20 ತುಂಬೆ ಹೂವನ್ನು ತೆಗೆದುಕೊಂಡು ಅದರ ರಸವನ್ನು ತೆಗೆದು ತುಂಬಾ ಮೃದುವಾದ ಹೂವಾಗಿರುವುದರಿಂದ ಹಾಗೆಯೇ ಕಿವುಚಿದರೂ ರಸ ಬರುತ್ತದೆ. ಈ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಊಟ, ತಿಂಡಿ ಸೇವನೆಗೂ ಮುನ್ನ ಈ ಮಿಶ್ರಣವನ್ನು ಸೇವಿಸುವುದರಿಂದ ಶೀತಬಾಧೆ ನಿವಾರಣೆಯಾಗುತ್ತದೆ. ಗಂಟಲಲ್ಲಿ ಕಫ ಅತಿಯಾಗಿ ಹೊರ ಬರದೆ ಕಾಡುವ ಕಫದ ಸಮಸ್ಯೆಗೂ ಕೂಡ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇತ್ತಿಚೆಗೆ ಪಟ್ಟಣ ಪ್ರದೇಶಗಳಲ್ಲಿ ತುಂಬೆ ಗಿಡ ವಿರಳವಾಗಿವೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.