ADVERTISEMENT

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ: ಲೇಖಕ ಬಿ.ಶ್ರೀಪಾದ ಭಟ್‌

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 2:04 IST
Last Updated 21 ಜುಲೈ 2025, 2:04 IST
ದೊಡ್ಡಬಳ್ಳಾಪುರದ ಡಾ.ಡಿ.ಆರ್.ನಾಗರಾಜ್‌ ಬಳಗದಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ಒಕ್ಕೂಟವೋ-ತಿಕ್ಕಾಟವೋ’ ಪುಸ್ತಕ ಕುರಿತ ಸಂವಾದದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ರವಿ ಬಾಗಿ ಮಾತನಾಡಿದರು
ದೊಡ್ಡಬಳ್ಳಾಪುರದ ಡಾ.ಡಿ.ಆರ್.ನಾಗರಾಜ್‌ ಬಳಗದಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ಒಕ್ಕೂಟವೋ-ತಿಕ್ಕಾಟವೋ’ ಪುಸ್ತಕ ಕುರಿತ ಸಂವಾದದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ರವಿ ಬಾಗಿ ಮಾತನಾಡಿದರು   

ದೊಡ್ಡಬಳ್ಳಾಪುರ: ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿಗೂ ಈಗಿನ ಅಘೋಷಿತ ತುರ್ತು ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಎಂದು ಲೇಖಕ ಬಿ.ಶ್ರೀಪಾದ ಭಟ್‌ ಅಭಿಪ್ರಾಯಪಟ್ಟರು.   

ಅಂದಿನ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು ಖುಷಿಯಾಗಿದ್ದರು. ಆದರೆ, ಈಗಿನ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಯಾರು ಹೆಚ್ಚು ಖುಷಿಯಾಗಿದ್ದಾರೆ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು. 

ಭಾನುವಾರ ನಗರದ ಆರ್‌.ಡಿ.ಕನ್ವೆನ್ಷನ್‌ ಹಾಲ್‌ನಲ್ಲಿ ಡಾ.ಡಿ.ಆರ್.ನಾಗರಾಜ್‌ ಬಳಗದಿಂದ ನಡೆದ ‘ಡಿ.ಆರ್‌.ಎನ್‌.ತಿಂಗಳ ಮಾತುಕತೆ’ ಕಾರ್ಯಕ್ರಮದಲ್ಲಿ ‘ಒಕ್ಕೂಟವೋ-ತಿಕ್ಕಾಟವೋ’ ಪುಸ್ತಕ ಕುರಿತು ಸಂವಾದದಲ್ಲಿ ಅವರು ಮಾತನಾಡಿದರು.

ADVERTISEMENT

ಜವಾಹರಲಾಲ್‌ ನೆಹರೂ ಕಾಲದಿಂದಲೂ ಕೇಂದ್ರ, ರಾಜ್ಯ ಸರ್ಕಾರಗಳ ನಡುವೆ ಒಕ್ಕೂಟದ ತಿಕ್ಕಾಟ ಇವೆ. ಆದರೆ, ದಶಕದಿಂದ ಈಚೆಗೆ 2014ರ ನಂತರ ಒಕ್ಕೂಟ ವ್ಯವಸ್ಥೆಯ ಚರ್ಚೆಗಳ ದಿಕ್ಕು ಬದಲಾಗಿದೆ ಎಂದರು.

‘ಸ್ವಾತಂತ್ರ್ಯ ನಂತರ ದೇಶದಲ್ಲಿನ ಪ್ರಾಂತೀಯ ಸಂಸ್ಥಾನಗಳನ್ನು ಒಟ್ಟುಗೂಡಿಸಲು ಆಗ ಬಲಿಷ್ಠ ಕೇಂದ್ರ ಸರ್ಕಾರದ ಅಗತ್ಯ ಇತ್ತು. ಆದರೆ ಈಗ ಬಲಿಷ್ಠ ಕೇಂದ್ರ ಸರ್ಕಾರದ ಅಗತ್ಯ ಇಲ್ಲ.ನಮ್ಮದು ಕೇಂದ್ರ ಸರ್ಕಾರ ವ್ಯವಸ್ಥೆಯೂ ಅಲ್ಲ, ಒಕ್ಕೂಟ ವ್ಯವಸ್ಥೆಯು ಅಲ್ಲದ ಅರೆಬರೆ ಒಕ್ಕೂಟ ವ್ಯವಸ್ಥೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಚುನಾಯಿತ ರಾಜ್ಯ ಸರ್ಕಾರ ವಜಾ ಮಾಡುವ ಮೂಲಕ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ಮೇಲೆ ದಬ್ಬಾಳಿಕೆ ಮಾಡುತಿತ್ತು. 1994 ಎಸ್‌.ಆರ್‌.ಬೋಮ್ಮಾಯಿ ಸರ್ಕಾರ ವಜಾ ಪ್ರಕರಣದ ತೀರ್ಪಿನಿಂದ ಒಕ್ಕೂಟ ವ್ಯವಸ್ಥೆಗೆ ಒಂದಿಷ್ಟು ಬಲ ಬಂದಿತ್ತು. ಶಾಸಕರನ್ನು ಖರೀದಿಸಿ ಯಡಿಯೂರಪ್ಪ ಅಧಿಕಾರ ಹಿಡಿದಿದ್ದು ಒಕ್ಕೂಟ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಎಂದರು. 

ಜಿಎಸ್‌ಟಿ ಜಾರಿಯಿಂದ ಒಕ್ಕೂಟ ವ್ಯವಸ್ಥೆ ಉಲ್ಟಾ ಆಗಿದೆ. ರಾಜ್ಯ ಸರ್ಕಾರಗಳ ಸ್ವಾಯತ್ತತೆ ಬದಲಾಗಿದೆ. ಆರ್‌ಬಿಐ ಲಾಭದಲ್ಲಿನ ಡಿವಿಡೆಂಟ್‌ ಹಣವನ್ನು ರಾಜ್ಯಗಳಿಗೂ ನೀಡಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಉತ್ತರ, ದಕ್ಷಿಣ ಎನ್ನುವ ಚರ್ಚೆಯೇ ಅಪಾಯಕಾರಿ. ಜನಸಂಖ್ಯೆ ಆಧಾರದ ಮೇಲೆ ತೆರಿಗೆ ಹಣ ಹಂಚಿಕೆ ಆಗಬಾರದು ಎಂದರು.

ಆಕೃತಿ ಪುಸ್ತಕ ಪ್ರಕಾಶನದ ಗುರುಪ್ರಸಾದ್‌,ಡಿ.ಆರ್‌.ಎನ್‌ ಬಳಗದ ದಯಾನಂದಗೌಡ, ಡಾ. ಪ್ರಕಾಶ್‌ ಮಂಟೇದ, ಸಂವಾದದ ರಾಮಕ್ಕ ಇದ್ದರು.

‘ಬಹುತ್ವ ಭಾರತದಲ್ಲಿ ಏಕ ಸಂಸ್ಕೃತಿ ಅಸಾಧ್ಯ’
ಇದು ಬಹುತ್ವ ಭಾರತ. ಇಲ್ಲಿ ಒಂದು ಭಾಷೆ ಒಂದು ಶಿಕ್ಷಣ ನೀತಿ ಅಸಾಧ್ಯ. ಹಿಂದಿ ರಾಷ್ಟ್ರ ಭಾಷೆ ಅಲ್ಲ. ಉತ್ತರ ದಕ್ಷಿಣದಲ್ಲಿ ಯಾವುದೂ ಶ್ರೇಷ್ಠವಲ್ಲ ಯಾವುದೂ ಕನಿಷ್ಠವೂ ಅಲ್ಲ. ಎಲ್ಲವೂ ಸಮಾನ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ರವಿ ಬಾಗಿ ಹೇಳಿದರು. ಯಾವುದೇ ಒಂದು ರಾಜ್ಯದ ಚುನಾಯಿತ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದು ಆಡಳಿತ ನಡೆಸುವಾಗ ಸರ್ಕಾರ ಪತನವಾಗುತ್ತದೆ ಎಂದು ವಿರೋಧ ಪಕ್ಷಗಳು ಹೇಳುವುದೇ ತಪ್ಪು. ಕೇಂದ್ರ ಸರ್ಕಾರದ ಬಜೆಟ್‌ ಮೊತ್ತ ದೊಡ್ಡದಾಗಿರುವಂತೆ ರಾಜ್ಯಗಳಿಗೆ ಬರುವ ಅನುದಾನವು ಹೆಚ್ಚಾಗಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.